ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಫೆಬ್ರವರಿ 27 ರಂದು ಲೋಕಾರ್ಪಣೆಯಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದು, ನೂತನ ವಿಮಾನ ನಿಲ್ದಾಣ ನವವಧುವಿನಂತೆ ಸಿಂಗಾರಗೊಂಡಿದೆ.
ಶಿವಮೊಗ್ಗ ತಾಲೂಕು ಸೋಗಾನೆ ಗ್ರಾಮದ ವ್ಯಾಪ್ತಿಯಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 775 ಎಕರೆ ಪ್ರದೇಶದಲ್ಲಿ 449.22 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಟಿಆರ್ 72 ನಿಂದ ಪ್ರಾರಂಭವಾಗಿ ಏರ್ ಬಸ್ 320ರ ವರೆಗೆ ಎಲ್ಲಾ ರೀತಿಯ ವಿಮಾನಗಳು ಹಗಲು ಹಾಗೂ ರಾತ್ರಿ ಕಾರ್ಯಾಚರಣೆ ಮಾಡುವಂತೆ ನಿರ್ಮಾಣ ಮಾಡಲಾಗಿದೆ. 3.2 ಕಿಲೋ ಮೀಟರ್ನ ರನ್ ವೇ ಇದೆ. ಇದು ಬೆಂಗಳೂರು ಹೂರತು ಪಡಿಸಿದರೆ ಎರಡನೇ ಅತಿ ದೊಡ್ಡ ರನ್ ವೇ ಆಗಿದೆ. 3,050 ಮೀಟರ್ ಉದ್ದ ಹಾಗೂ 45 ಮೀಟರ್ ಅಗಲ ಹೊಂದಿದೆ.
ಮುಂಭಾಗದಿಂದ ಕಮಲ, ಹಿಂಭಾಗದಿಂದ ಹದ್ದು:ಶಿವಮೊಗ್ಗದ ವಿಮಾನ ನಿಲ್ದಾಣವು ಮುಂಭಾಗದಲ್ಲಿ ಕಮಲ ಮತ್ತು ಹಿಂಭಾಗದಲ್ಲಿ ಹದ್ದು ಪಕ್ಷಿಯ ಆಕಾರವನ್ನು ಹೊಂದಿದೆ. ಅತ್ಯಂತ ನೈಪುಣ್ಯತೆಯಿಂದ ಏರ್ಪೋರ್ಟ್ನಿರ್ಮಾಣ ಮಾಡಲಾಗಿದ್ದು, ಟರ್ಮಿನಲ್ ಕಟ್ಟಡವು 106 ಮೀಟರ್ ಉದ್ದ, 66 ಮೀಟರ್ ಅಗಲ ಹೊಂದಿದೆ. ಇದು ಗೋಪುರ ಮಾದರಿಯಲ್ಲಿ ಬಂದಿದ್ದು, ಟರ್ಮಿನಲ್ನ ಬಲ ಮತ್ತು ಎಡ ತುದಿಗಳು 9 ಮೀಟರ್ ಎತ್ತರವಿದ್ರೆ, ಮಧ್ಯಭಾಗ 20 ಮೀಟರ್ ಎತ್ತರವಿದೆ. ಟರ್ಮಿನಲ್ ಅನ್ನು 74 ಪಿಲ್ಲರ್ಗಳಿಂದ ನಿಲ್ಲಿಸಲಾಗಿದೆ. ಇದರ ಮೇಲ್ಛಾವಣಿಯನ್ನು ಎಸಿಪಿ ಎಂ.ಎಸ್ ನಿಂದ ಮುಚ್ಚಲಾಗಿದೆ. ಟರ್ಮಿನಲ್ನಲ್ಲಿ 6 ಚೆಕ್ ಇನ್ ಕೌಂಟರ್ಗಳಿವೆ. ಇದರಲ್ಲಿ ವಿಐಪಿ ಗಳಿಗೆ ಪ್ರತ್ಯೇಕ ಎರಡು ಚೆಕ್ ಇನ್ ಕೌಂಟರ್, ಉಳಿದ ನಾಲ್ಕು ಸಾಮಾನ್ಯ ಚೆಕ್ ಇನ್ ಕೌಂಟರ್ಗಳಾಗಿವೆ. ಒಂದು ಕ್ಯಾಂಟೀನ್ ಇದೆ. ಎರಡು ಸ್ನ್ಯಾಕ್ಸ್ ಬಾರ್ಗಳಿವೆ. ಚೈಲ್ಡ್ ಕೇರ್ , ಡಾಕ್ಟರ್ಸ್, ಏರ್ ಲೈನ್ ಆಫೀಸ್, ಲಾಸ್ಟ್ ಅಂಡ್ ಫೈನ್, ಸ್ಟಾಫ್ ಎಲ್ಲಾ ಸೇರಿ ಟರ್ಮಿನಲ್ನಲ್ಲಿ 35 ರೂಮ್ಗಳಿವೆ.
ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಹೈದರಾಬಾದ್ ಮೂಲದ ಕೆಎಂವಿ (ಕೆ.ಎಂ. ವರದಪ್ರಸಾದ ರಾವ್) ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ನಿರ್ಮಾಣ ಮಾಡಿದೆ. ಈ ಕಂಪನಿಯವರ ಪ್ರಕಾರ, ಇಷ್ಟು ದೊಡ್ಡ ಟರ್ಮಿನಲ್ ಸೇರಿದಂತೆ ಮೂಲಭೂತ ಸೌಕರ್ಯವುಳ್ಳ ಟರ್ಮಿನಲ್ ಇರುವುದು ಬೆಂಗಳೂರನ್ನು ಬಿಟ್ಟರೆ ಶಿವಮೊಗ್ಗದಲ್ಲಿಯೇ ಎನ್ನುತ್ತಾರೆ. ವಿಐಪಿಗಳಿಗೆ ಪ್ರತ್ಯೇಕ ಶೌಚಾಲಯವಿದೆ. ಹೊರಗಡೆ ಟ್ಯಾಕ್ಸಿ ಚಾಲಕರಿಗೆ ಒಂದು ಶೌಚಾಲಯವಿದ್ದು, ಒಟ್ಟು ಐದು ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ರಾಜ್ಯದ ಎರಡನೇ ಅತಿ ದೊಡ್ಡ ರನ್ ವೇ: ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ 3,050 ಮೀಟರ್ ಉದ್ದ ಹಾಗೂ 45 ಮೀಟರ್ ಅಗಲ ಹೊಂದಿದೆ. ಈ ರನ್ ವೇ ನಲ್ಲಿ ದೇಶದ ಅತಿ ದೊಡ್ಡ ವಿಮಾನವಾದ ಏರ್ ಬಸ್ 320ಅನ್ನು ಇಳಿಸಬಹುದಾಗಿದೆ.
ಕರ್ನಾಟಕ ರಾಜ್ಯದಲ್ಲಿಯೇ ಅತಿ ದೊಡ್ಡದಾದ ಎಟಿಎಸ್( ಏರ್ ಟ್ರಾಫಿಕ್ ಕಂಟ್ರೋಲರ್) ಕಟ್ಟಡವನ್ನು ಹೊಂದಿರುವ ಏಕೈಕ ವಿಮಾನ ನಿಲ್ದಾಣ ಇದಾಗಿದೆ. ವಿಮಾನ ನಿಲ್ದಾಣದ ಸುತ್ತ ನಿಗದಿತ ಸ್ಥಳಗಳಲ್ಲಿ ವಾಚ್ ಟವರ್ ಸೇರಿದಂತೆ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಅಲ್ಲಲ್ಲಿ ತುರ್ತು ನಿರ್ಗಮನಕ್ಕೆ ಸಣ್ಣ ಸಣ್ಣ ಗೇಟ್ ನಿರ್ಮಾಣ ಮಾಡಲಾಗಿದೆ. ಟರ್ಮಿನಲ್ ಮುಂಭಾಗ ಸುಂದರವಾದ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ಪ್ರವೇಶದಲ್ಲೂ ಸಹ ಟರ್ಮಿನಲ್ ಮಾದರಿ ಕಮಾನು ನಿರ್ಮಾಣ ಮಾಡಲಾಗುತ್ತಿದೆ.
ವಿಮಾನ ನಿಲ್ದಾಣದ ಪ್ರವೇಶದಲ್ಲಿ ಪ್ರಯಾಣಿಕರಿಗೆ ಎರಡು ದೊಡ್ಡ ರಸ್ತೆಗಳು ಸ್ವಾಗತ ಕೋರುತ್ತವೆ. ಈ ರಸ್ತೆಯು ನೇರವಾಗಿ ಟರ್ಮಿನಲ್ಗೆ ಸಂಪರ್ಕ ಮಾಡುತ್ತವೆ. ಟರ್ಮಿನಲ್‌ನಿಂದ ವಾಪಸ್ ಆಗಲು ಪ್ರತ್ಯೇಕ ರಸ್ತೆ ಇದೆ. ಅಲ್ಲದೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ವಿಮಾನ ನಿಲ್ದಾಣವು 775 ಎಕರೆ ಪ್ರದೇಶದಲ್ಲಿ ಇರುವುದರಿಂದ ಅತ್ಯಂತ ವಿಶಾಲವಾಗಿ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಸುತ್ತಲು ಹಸಿರೀಕರಣ ಮಾಡಲಾಗುತ್ತದೆ. ಹಗಲು, ರಾತ್ರಿ ಸಹ ವಿಮಾನ ಆಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಾಜ್ಯ ಸರ್ಕಾರದ ಉಸ್ತುವಾರಿಯಲ್ಲಿರುವ ಏಕೈಕ ವಿಮಾನ ನಿಲ್ದಾಣ: ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯ ಸರ್ಕಾರದ ಸುರ್ಪದಿಯಲ್ಲಿ ಇರುವ ಏಕೈಕ ವಿಮಾನ ನಿಲ್ದಾಣವಾಗಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ವಿಮಾನ ನಿಲ್ದಾಣಗಳು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನಿರ್ವಹಣೆಯಲ್ಲಿವೆ. ಇದರಿಂದ ರಾಜ್ಯ ಸರ್ಕಾರಕ್ಕೆ ಸ್ವಲ್ಪ ಮಟ್ಟಿಗೆ ಹೊರೆಯಾಗಬಹುದು ಎನ್ನಬಹುದು. ಇದಕ್ಕಾಗಿ ಪ್ರತ್ಯೇಕ ನಿರ್ದೇಶಕರನ್ನು ಹಾಗೂ ಟೆಕ್ನಿಕಲ್ ಅಡ್ವೆಸರ್ ಅನ್ನು ನೇಮಕ ಮಾಡಲಾಗಿದೆ.