ಶಿವಮೊಗ್ಗ: ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಫೋನಿನಲ್ಲಿ ಮಾತನಾಡುತ್ತಾರೆ ಎಂದಾಗ ನನಗೆ ಆಶ್ಚರ್ಯವಾಯಿತು ಎಂದರು.
ಪಕ್ಷದ ಹಿರಿಯರಾದ ಸಂತೋಷ್ ಜೀ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ನನಗೆ ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಹೇಳಿದಾಗ 10 ನಿಮಿಷ ಯೋಚನೆ ಮಾಡದೇ ಪತ್ರಕ್ಕೆ ಸಹಿ ಮಾಡಿ ಕಳುಹಿಸಿಕೊಟ್ಟೆ. ಇದಾದ ನಂತರ ಪಕ್ಷದ ಕಾರ್ಯಕರ್ತರು ನನ್ನ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯಾದ್ಯಂತ ನಮ್ಮ ಅನೇಕ ಹಿತೈಷಿಗಳು ಕರೆ ಮಾಡಿ ವೈಚಾರಿಕವಾಗಿ ಸಂತೃಪ್ತಿ ಪಡಿಸಿದ್ದಕ್ಕೆ ಸಂತೋಷಪಟ್ಟಿದ್ದೇನೆ ಎಂದು ತಿಳಿಸಿದರು.
ಜಗದೀಶ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ ಎಂದಾಗ ನನಗೆ ನೋವಾಯಿತು. ನಾನು ಅವರಿಗೆ ಖಾಸಗಿ ಪತ್ರವನ್ನು ಬರೆದೆ. ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ಪಕ್ಷದ ಹೈಕಮಾಂಡ್ ನಡೆಗೆ ಸಮ್ಮತಿ ಸೂಚಿಸಿದ ಹಿನ್ನೆಲೆ ಪಕ್ಷದ ಮುಖಂಡರು ಮತ್ತು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಾನೇನು ವಿಶೇಷ ಮಾಡಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನ ಕೆಲಸವನ್ನೇ ಮಾಡಿದ್ದೇನೆ. ಭಾರತೀಯ ಜನತಾ ಪಾರ್ಟಿಯ ಸಂಸ್ಕಾರವನ್ನು ಮುಂದುವರಿಸಿದ್ದೇನೆ. ಇದನ್ನೇ ಎಲ್ಲರೂ ವಿಶೇಷ ಅಂತ ಭಾವಿಸಿರುವುದು ನನಗೆ ಸಂತೋಷ ತಂದಿದೆ ಎಂದರು.
ನಿವೃತ್ತಿ ಘೋಷಣೆ ಬಳಿಕ ಅನೇಕ ಹಿರಿಯರು, ಪರಿವಾರದವರು ನಮ್ಮ ಮನೆಗೆ ಬಂದು ಶುಭಹಾರೈಸಿದರು. ಆದರೆ ಇಂದು ನಮ್ಮ ನಾಯಕರಾದ ಮೋದಿ ಅವರು ನನ್ನ ನಡೆ ಬಗ್ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಜೊತೆಗೆ ರಾಜ್ಯಕ್ಕೆ ಬಂದಾಗ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಪ್ರಧಾನಿ ತಿಳಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು. ನಾನು ಅವರು ಕರೆ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಇದು ನನಗೆ ಸಂತೋಷ ತಂದಿದೆ ಎಂದು ಈಶ್ವರಪ್ಪ ಸಂತಸ ವ್ಯಕ್ತಪಡಿಸಿದರು.