ಶಿವಮೊಗ್ಗ: ಗ್ರಾಮೀಣ ಭಾಗದ ಮಕ್ಕಳಲ್ಲಿ ಸೌರಮಂಡಲ ಹಾಗೂ ಆಕಾಶಕಾಯಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಸಂಶೋಧನೆಗೆ ತೊಡಗಿಸುವ ಸಲುವಾಗಿ 2015-16 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರಾಜ್ಯಕ್ಕೆ ಐದು ತಾರಾಲಯಗಳನ್ನು ಮಂಜೂರು ಮಾಡಿತು. ಈ ಐದರಲ್ಲಿ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಲ್ಲಿ ನಿರ್ಮಾಣವಾದ ತಾರಾಲಯವೂ ಒಂದು.
ಈ ತಾರಾಲಯವನ್ನು ಆಯನೂರಿನ ಶಾಲಾ ಮೈದಾನದಲ್ಲಿ ನಿರ್ಮಾಣ ಮಾಡಲಾಗಿದೆ. ನಿರ್ಮಾಣ ಎಂದರೆ ಕೇವಲ ಕಟ್ಟಡದ ಕಾಮಗಾರಿ ಆಗಿದೆಯೇ ವಿನಃ ಆಕಾಶಕಾಯಗಳ ಮಾಹಿತಿ ಒದಗಿಸುವ ತಾಂತ್ರಿಕ ಕಾಮಗಾರಿ ನಡೆದಿಲ್ಲ. ಇದರಿಂದ ಈ ತಾರಾಲಯವು ಕಳೆದ ಐದು ವರ್ಷಗಳಿಂದ ಪಾಳು ಬಿದ್ದು, ಪುಂಡ ಪೋಕರಿಗಳ ತಾಣವಾಗಿದೆ.
2016-17 ರಿಂದ ಪಾಳು ಬಿದ್ದ ತಾರಾಲಯ: ಆಯನೂರಿನಲ್ಲಿ ನಿರ್ಮಿತವಾಗಿರುವ ತಾರಾಲಯವನ್ನು ನಿರ್ಮಿತಿ ಕೇಂದ್ರ ನಿರ್ಮಿಸಿದೆ. ಕಟ್ಟಡ ನಿರ್ಮಾಣ ಮಾಡಿದೆ. ಅದನ್ನು ಬಿಟ್ಟರೆ ತಾರಾಲಯ ಪ್ರಾರಂಭ ಮಾಡಲು ಬೇಕಾದ ಮೂಲ ಸೌಕರ್ಯವನ್ನು ಒದಗಿಸಿಲ್ಲ. ತಾರಾಲಯದ ಕಟ್ಟಡದ ಒಳಗೆ ಡೂಮ್ ಒಂದನ್ನು ಹಾಕಿದ್ದು ಬಿಟ್ಟರೆ, ಬೇರೆ ಏನೂ ಮಾಡಿಲ್ಲ. ತಾರಾಲಯ ಪಾಳು ಬಿದ್ದಿದ್ದರಿಂದ ಇಲ್ಲಿಗೆ ಬರುವ ಪುಂಡ ಪೋಕರು, ಮುಂಭಾಗದ ಗಾಜುಗಳನ್ನು ಪುಡಿ ಮಾಡಿದ್ದಾರೆ. ಶೌಚಾಲಯದ ಎಲ್ಲ ವಸ್ತುಗಳನ್ನು ಕಿತ್ತು ಹಾಕಲಾಗಿದೆ. ನೆಲಕ್ಕೆ ಹಾಕಿದ್ದ ಟೈಲ್ಸ್ಗಳನ್ನು ಕಿತ್ತುಕೊಂಡು ಹೋಗಿದ್ದಾರೆ.
ತಾರಾಲಯದ ಕಟ್ಟಡ ನಿರ್ಮಾಣ ಮಾಡಿದ್ದು ಬಿಟ್ಟರೆ ಬೇರೆ ಕಾಮಗಾರಿ ನಡೆಯದ ಕಾರಣ ಇಲ್ಲಿ ಗುಂಡು ಪಾರ್ಟಿ ಮಾಡಲಾಗುತ್ತಿದೆ. ಗುಂಡು ಹಾಕಿ ಇಲ್ಲೆ ಮಲಗಿ ನಂತರ ವಾಪಸ್ ಆಗ್ತಾ ಇದ್ದಾರೆ. ಇದಕ್ಕೆ ಇಲ್ಲಿ ಸಿಗುವ ಎಣ್ಣೆ ಬಾಟಲಿಗಳೇ ಸಾಕ್ಷಿಯಾಗಿವೆ. ಗಾಂಜಾ ಸೇವನೆ ಸೇರಿದಂತೆ ಇತರ ಅನೈತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಇದಕ್ಕೆ ಬ್ರೇಕ್ ಹಾಕಬೇಕಿದೆ.