ಶಿವಮೊಗ್ಗ: ದುಬೈನಿಂದ ವಾಪಸ್ ಆಗಿದ್ದ ವ್ಯಕ್ತಿಯ ಕೋವಿಡ್ ವರದಿಯು ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ. ಈ ಹಿಂದೆ ಇದೇ ವ್ಯಕ್ತಿಗೆ ಸೌತ್ ಆಫ್ರಿಕಾ ಕೊರೊನಾ ತಗುಲಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ನೀಡಿದ್ದ ವರದಿ ಹೇಳಿತ್ತು.
ಶಿವಮೊಗ್ಗದ ಜೆ.ಪಿ. ನಗರದ 53 ವರ್ಷದ ವ್ಯಕ್ತಿಯು ಜನವರಿಯಲ್ಲಿ ಕೆಲಸಕ್ಕಾಗಿ ಸೌದಿ ಅರೇಬಿಯಾಕ್ಕೆ ಹೊರಟಿದ್ದ. ಆದರೆ, ದುಬೈಗೆ ಹೋದಾಗ ಅಲ್ಲಿಂದ ಸೌದಿಗೆ ತೆರಳಲು ಅನುಮತಿ ಸಿಗದ ಕಾರಣ ಇತ್ತ ಭಾರತಕ್ಕೆ ಬರಲು ವಿಮಾನ ಸಿಗದೇ ಸುಮಾರು 15 ದಿನ ದುಬೈನಲ್ಲಿ ಉಳಿದುಕೊಂಡಿದ್ದರು.
ನಂತರ ಫೆಬ್ರವರಿ 21ರಂದು ದುಬೈನಿಂದ ಹೊರಟು ಫೆಬ್ರವರಿ 22ಕ್ಕೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿವಮೊಗ್ಗದ ವ್ಯಕ್ತಿಯ ಸ್ವಾಬ್ ಪಡೆದು ಕಳುಹಿಸಿದ್ದರು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಈ ವ್ಯಕ್ತಿಯು ಬಸ್ನಲ್ಲಿ ವಾಪಸ್ ಬಂದು ಒಂದು ವಾರ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು. ಇವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ.
ಇದನ್ನೂ ಓದಿ:ಮಮತಾ ಬ್ಯಾನರ್ಜಿ ಯೋಗಕ್ಷೇಮ ವಿಚಾರಿಸಲು ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೋಗ್ತಾರಾ!?
ಆದರೆ ಮೊನ್ನೆ ಮಾರ್ಚ್ 10ರ ರಾತ್ರಿ ಈ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಅಂದರೆ ರೂಪಾಂತರಿ ಸೌತ್ ಆಫ್ರಿಕಾ ವೈರಸ್ ಬಂದಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಜಿಲ್ಲಾ ಆರೋಗ್ಯ ಇಲಾಖೆಯವರು ರಾತ್ರಿಯೇ ವ್ಯಕ್ತಿ ಮನೆಗೆ ಆಗಮಿಸಿ, ಅವರನ್ನು ಅವರ ಹೆಂಡತಿ ಹಾಗೂ ಮಗನನ್ನು ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಿದ್ದರು.
ದುಬೈನಿಂದ ವಾಪಸ್ ಆದ ವ್ಯಕ್ತಿ ಹಾಗೂ ಇವರ ಜೊತೆ ಪ್ರಥಮ ಸಂಪರ್ಕದಲ್ಲಿದ್ದ 9 ಜನರನ್ನು ಹಾಗೂ ದ್ವಿತೀಯ ಸಂಪರ್ಕ 30 ಜನರ ಸ್ವಾಬ್ ತೆಗೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲರ ವರದಿಯು ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ದುಬೈನಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಗೆ 'ಸೌತ್ ಆಫ್ರಿಕಾ ವೈರಸ್': ಬೆಂಗಳೂರಿನಿಂದ ಬಸ್ನಲ್ಲಿ ಪ್ರಯಾಣಿಸಿದ್ದ ಸೋಂಕಿತ
ಇದರಿಂದ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಅದು ರೂಪಾಂತರಿ ವೈರಸ್ ಬಂದಿದೆ ಎಂಬುದು ಜನರಲ್ಲಿ ಗಾಬರಿಯನ್ನುಂಟು ಮಾಡಿತ್ತು. ಆದರೆ, ಕೊರೊನಾ ವರದಿಗಳ ಮೇಲೆಯೇ ಅನುಮಾನಪಡುವಂತಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ನೀಡಿದ್ದ ವರದಿಯು ಪಾಸಿಟಿವ್ ಆಗಿದ್ದು, ಶಿವಮೊಗ್ಗದಲ್ಲಿ ಪರೀಕ್ಷೆ ನಡೆಸಿದಾಗ ನೆಗೆಟಿವ್ ಹೇಗೆ ಬಂತು ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.