ಶಿವಮೊಗ್ಗ: ದೀಪಾವಳಿ ಹಬ್ಬದ ದಿನ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಗಾಂಧಿ ಬಜಾರ್ ಧರ್ಮರಾಯನಕೇರಿ ನಿವಾಸಿ ಮಲ್ಲೇಶ್ ಅಲಿಯಾಸ್ ಮಲ್ಲ(35) ಎಂಬ ವ್ಯಕ್ತಿ ಕೊಲೆಗೀಡಾದವರಾಗಿದ್ದಾರೆ.
ನಗರದ ಹೊಳೆಹೊನ್ನೂರು ರಸ್ತೆಯ ಚಿಕ್ಕಲ್ ನಲ್ಲಿ ಮಲ್ಲೇಶ್ನನ್ನು ಕೊಲೆ ಮಾಡಲಾಗಿದೆ. ಒಂದೇ ಬೈಕ್ ನಲ್ಲಿ ಬಂದ ಮೂವರು ಯುವಕರು ಮಲ್ಲೇಶ್ನ ಬೈಕ್ಗೆ ಡಿಕ್ಕಿ ಹೊಡೆಸಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಮಲ್ಲೇಶ್ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ಮಲ್ಲೇಶ್ ಮೇಲೇಳುವಷ್ಟರಲ್ಲಿ ಡಿಕ್ಕಿ ಹೊಡೆದು ಬೀಳಿಸಿದ ಯುವಕರೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದಾರೆ. ತೀವ್ರ ಗಾಯಗೊಂಡಿದ್ದ ಮಲ್ಲೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.