ಶಿವಮೊಗ್ಗ: ತಾಲೂಕಿನ ಸೋಗಾನೆಯಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದು ಉದ್ಘಾಟಿಸಿದ್ದಾರೆ. ದೆಹಲಿಯಿಂದ ನೇರವಾಗಿ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ, ಟರ್ಮಿನಲ್ನಲ್ಲಿ ನೂತನ ವಿಮಾನ ನಿಲ್ದಾಣದ ಕಿರು ಪರಿಚಯ ಪಡೆದುಕೊಂಡರು. ಈ ವೇಳೆ ಮಹಿಳಾ ಸ್ವ ಸಹಾಯ ಗುಂಪಿನವರು ಸಿದ್ಧಪಡಿಸಿದ ವಿವಿಧ ಉತ್ಪನ್ನಗಳನ್ನು ವೀಕ್ಷಿಸಿ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು.
ಈ ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಸ್ಮಾರ್ಟ್ ಸಿಟಿ ಕಾಮಗಾರಿ, ಜಲ ಜೀವನ್ ಮಿಷನ್ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು. ಪ್ರಧಾನಿ ವೇದಿಕೆ ಕಾರ್ಯಕ್ರಮ ಮುಗಿಸಿ ವಾಪಸ್ ಆಗುತ್ತಿದ್ದಂತೆ ಸಚಿವರುಗಳು ಹೆಲಿಕಾಪ್ಟರ್ನಲ್ಲಿ ತೆರಳಲು ಹೋದಾಗ ಪೊಲೀಸ್ ಎಕ್ಸಾರ್ಟ್ ಇರುವ ಕಾರಣ ವೇದಿಕೆ ಕಾರ್ಯಕ್ರಮ ಮುಗಿದರೂ ಕಾರ್ಯಕ್ರಮಕ್ಕೆ ಬಂದಿದ್ದ ಜನರನ್ನು ಹೊರಬಿಡಲಿಲ್ಲ. ಇದರಿಂದ ಜನರು ಜರ್ಮನ್ ಟೆಂಟ್ ಕೆಳಗೆ ನುಸುಳಿ ಹೊರಬಂದರು.
ಕಾರ್ಯಕ್ರಮ ಮುಗಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಜನರು ನೂತನ ಟರ್ಮಿನಲ್‌ನತ್ತ ಸಾಗಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಟರ್ಮಿನಲ್ಗೆ ಹೋಗುವ ದಾರಿಯಲ್ಲಿಯೇ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಎಲ್ಲರಿಗೂ ಟರ್ಮಿನಲ್ ಒಳಗೆ ಪ್ರವೇಶ ನೀಡದ ಕಾರಣ ಕೆಲವರು ನಿರಾಸೆಯಿಂದ ಹಿಂತಿರುಗಿದರು.