ಶಿವಮೊಗ್ಗ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದಿಂದ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಲುಗಿ ಹೋಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಮಳೆ ಸುರಿಯುತ್ತಿದೆ. ನಿನ್ನೆ ರಾತ್ರಿಯಿಂದ ಪ್ರಾರಂಭವಾದ ಮಳೆ ಇಲ್ಲಿಯವರೆಗೂ ನಿಂತಿಲ್ಲ. ಹೀಗಾಗಿ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮನೆಗಳಿಗೆ ನೀರು ತುಂಬಿ ಅವಾಂತರ:ರಾತ್ರಿಯಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ನಗರದ ಹಲವು ಬಡಾವಣೆಗಳು ಜಲಾವೃತವಾಗಿವೆ. ಗೋಪಾಲಗೌಡ ಬಡಾವಣೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಜನ ನೀರು ಹೊರಹಾಕುತ್ತಾ ಮಹಾನಗರ ಪಾಲಿಕೆಯವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ನಗರದ ಆರ್ಎಂಎಲ್ ನಗರದಲ್ಲೂ ಸಹ ಹಲವು ಮನೆಗಳು ಜಲಾವೃತವಾಗಿವೆ. ಪರಿಣಾಮ ಜನ ತಮ್ಮ ಸ್ನೇಹಿತರ ಮನೆಗಳಿಗೆ ತೆರಳಿದ್ದಾರೆ. ಮನೆಯಲ್ಲಿನ ಎಲ್ಲ ಗೃಹ ಬಳಕೆ ವಸ್ತುಗಳು ನೀರಿನಲ್ಲಿ ನಿಂತಿವೆ. ಹೀಗಾಗಿ, ನಗರಕ್ಕೆ ಉಪ ಮೇಯರ್ ಶಂಕರ್ ಗನ್ನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಜನ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೇಯರ್ ಸುನೀತಾ ಅಣ್ಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು:ಆರ್ಎಂಎಲ್ ನಗರಕ್ಕೆ ಭೇಟಿ ನೀಡಿದ ಸುನೀತ ಅಣ್ಣಪ್ಪ ಅವರನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡರು. ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ನೀರು ಚರಂಡಿಯಲ್ಲಿ ಹರಿಯದೆ, ರಸ್ತೆ ಮೇಲೆ ಹರಿದು ಹೋಗುತ್ತಿದೆ. ಇದರಿಂದ ರಸ್ತೆ ನೀರು ಮನೆಗಳಿಗೆ ನುಗ್ಗಿದೆ. ಕಾಮಗಾರಿ ಸರಿಯಾಗಿ ಆಗದೇ ನಮಗೆ ಸಮಸ್ಯೆಯಾಗಿದೆ ಎಂದು ಜನ ಮೇಯರ್ ವಿರುದ್ದ ಹರಿಹಾಯ್ದರು. ಈ ವೇಳೆ, ಜನರಿಗೆ ಮೇಯರ್ ಉತ್ತರ ನೀಡಿ ಸುಸ್ತಾಗಿ ಹೋದರು. ನಂತರ ಅಲ್ಲಿಂದ ಕಾಲ್ಕಿತ್ತರು.