ಶಿವಮೊಗ್ಗ: ನಗರದ ಶಾಲೆಯೊಂದರಲ್ಲಿ ಪ್ರತಿವರ್ಷ ಹೊಸ ವರ್ಷಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಇಲ್ಲಿಯ ಅನುಪಿನಕಟ್ಟೆ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಪ್ರತಿವರ್ಷ ಜನವರಿ 1ರಂದು ವಿದ್ಯಾರ್ಥಿಗಳಿಂದ ಅವರ ತಂದೆ-ತಾಯಂದಿರ ಅಥವಾ ಪೋಷಕರ ಪಾದಪೂಜೆ ನಡೆಸಲಾಗುತ್ತದೆ. ಈ ದಿನದಂದು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ ಅಥವಾ ಪೋಷಕರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
ಪಾದಪೂಜೆ ಕಾರ್ಯಕ್ರಮದಲ್ಲಿ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಮಕ್ಕಳಿಗೆ ನೀಡಿ ಪೋಷಕರಿಂದ ಪಾದಪೂಜೆ ಮಾಡಿಸಲಾಗುತ್ತದೆ. ನಂತರ ಶಾಲೆಯಲ್ಲಿ ಪಾಠ, ಆಟೋಟಗಳಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನವನ್ನು ನೀಡಲಾಗುತ್ತದೆ. ಈ ಪಾದಪೂಜೆಯು ಕಳೆದ 19 ವರ್ಷಗಳಿಂದ ನಡೆದುಕೊಂಡು ಬಂದಿದೆ. ಪಾದಪೂಜೆ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಇದೇ ಶಾಲೆಯಲ್ಲಿ ಓದಿ ಉದ್ಯೋಗದಲ್ಲಿರುವ ಹಳೆಯ ವಿದ್ಯಾರ್ಥಿಗಳನ್ನು ಕರೆಯಿಸಿ ಅವರಿಂದ ಸ್ಫೂರ್ತಿದಾಯಕ ಭಾಷಣವನ್ನು ಮಾಡಿಸಲಾಗುತ್ತದೆ. ಅಲ್ಲದೆ ಜಿಲ್ಲೆಯ ವಿವಿಧ ಮಠಾಧೀಶರನ್ನು ಕರೆಯಿಸಿ ಆಶೀರ್ವಾದ ಮಾಡಿಸಲಾಗುತ್ತದೆ.
ಶಾಲೆಯಲ್ಲಿ ನಡೆದುಕೊಂಡು ಬಂದಿರುವ ಪಾದಪೂಜೆಯ ಕುರಿತು ಶಾಲೆಯ ಮುಖ್ಯಸ್ಥರಾದ ಶೋಭ ವೆಂಕಟರಮಣ ಅವರು ಮಾತನಾಡಿ, ನಮ್ಮ ಶಾಲೆಯಲ್ಲಿ ಜನ್ಮದಾತರಿಗೆ ಪಾದಪೂಜೆಯನ್ನು ನಡೆಸಲಾಗುತ್ತಿದೆ. 2005-06 ರಿಂದ ನಮ್ಮ ಶಾಲೆ ಸಂಸ್ಥಾಪಕರಾದ ವೆಂಕಟರಮಣ ಅವರು ಈ ಆಚರಣೆಯನ್ನು ಪ್ರಾರಂಭಿಸಿದರು. ಪಾದಪೂಜೆಯ ಮುಖ್ಯ ಉದ್ದೇಶ, ಮಕ್ಕಳು ಪೋಷಕರನ್ನು ಕಡೆಗಣಿಸುವುದನ್ನು ತಡೆಯಲು, ಮಕ್ಕಳಿಗೆ ವಿದ್ಯೆಯ ಜೊತೆ ನೈತಿಕ ಶಿಕ್ಷಣವನ್ನು ನೀಡಬೇಕು. ಮಕ್ಕಳ ಕರ್ತವ್ಯ, ಬಾಧ್ಯತೆಗಳೇನು ಎಂಬುದನ್ನು ತಿಳಿಸಿಕೊಡುವುದು, ತಂದೆ- ತಾಯಿ ಮಕ್ಕಳ ಸಂಬಂದವನ್ನು ಗಟ್ಟಿಗೊಳಿಸುವುದು ಎಂದು ಹೇಳಿದರು.