ಶಿವಮೊಗ್ಗ:ತನ್ನ ಕಾರು ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಕಾರು ಮಾಲೀಕನನ್ನೇ ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಾರಿನ ಲೋನ್ ಕಟ್ಟದೆ, ಕಾರು ಕಳ್ಳತನದ ಕಥೆ ಕಟ್ಟಿದ ಮಾಲೀಕನೇ ಈಗ ಜೈಲುಪಾಲಾಗಿದ್ದಾನೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಿಚಾರಣೆ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಳೆಬೈಲಿನ ನಿವಾಸಿ ಚಂದ್ರ ಕುಮಾರ್ ಎಂಬುವರು ತನ್ನ ಮನೆಯ ಮುಂದೆ ನಿಲ್ಲಿಸಿದ್ದ ಟೊಯೋಟಾ ಯಾರಿಸ್ ಕಾರನ್ನು ಕಳ್ಳರು ಕಳ್ಳತನ ಮಾಡಿದ್ದಾರೆ ಎಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೂರು ನೀಡಿದ ಚಂದ್ರ ಕುಮಾರ್ (28) ಹಾಗೂ ದಾವಣಗೆರೆ ಸರಸ್ವತಿ ನಗರದ ನಿವಾಸಿ ಪ್ರಶಾಂತ್ (29) ಎಂಬುವರನ್ನು ಬಂಧಿಸಿ ಕರೆ ತಂದಿದ್ದರು.
ಬಳಿಕ ಪ್ರಕರಣದ ತನಿಖೆ ನಡೆಸುತ್ತಿರುವಾಗ ದಾವಣಗೆರೆಯಲ್ಲಿ ಒಂದು ಹೊಸ ಕಾರು ಓಡಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇದರ ಮೇರೆಗೆ ದಾವಣಗೆರೆಗೆ ಹೋಗಿ ನೋಡಿದಾಗ ಸರಸ್ವತಿ ನಗರದ ನಿವಾಸಿ ಪ್ರಶಾಂತ್ ಬಳಿ ಕಾರು ಇರುತ್ತದೆ. ಈತ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿ ಕಾರು ಓಡಿಸಿರುತ್ತಾನೆ. ಈ ಮಾಹಿತಿಯ ಅನ್ವಯ ಮೊದಲು ಪ್ರಶಾಂತ್ನನ್ನು ಕರೆತಂದ ವಿಚಾರಣೆ ನಡೆಸಿದಾಗ ಕಾರನ್ನು ಚಂದ್ರ ಕುಮಾರ್ ನೀಡಿರುವು ಗೊತ್ತಾಗಿದೆ. ನಂತರ ಚಂದ್ರ ಕುಮಾರ್ನನ್ನು ಹಿಡಿದು ವಿಚಾರಣೆ ನಡೆಸಿದಾಗ, ತಾನೇ ಕಾರನ್ನು ಲೋನ್ ಪಡೆದು ಖರೀದಿ ಮಾಡಿದ್ದಾಗಿ ತಿಳಿಸಿದ್ದಾನೆ. ಕಾರಿನ ಲೋನ್ ತೀರಿಸಲು ಆಗದೆ ಕಾರು ಕಳೆದಿದೆ ಎಂದು ಸುಳ್ಳು ಹೇಳಿರುವುದು ಹಾಗೂ ಕಾರು ಕಳೆದರೆ ಅದರ ಇನ್ಸೂರೆನ್ಸ್ ಬರುತ್ತದೆ ಎಂದು ಹೀಗೆ ಮಾಡಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.