ಶಿವಮೊಗ್ಗ :ಚುನಾವಣಾ ಆಯೋಗ ಅಳೆದು ತೂಗಿ ಹೊರತಂದ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಮೀಸಲಾತಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆಯಲ್ಲೇ ವಿರೋಧ ವ್ಯಕ್ತವಾಗಿದೆ. ಈ ಬಾರಿಯ ಮೀಸಲಾತಿಯಲ್ಲಿ ಎಸ್ಸಿ/ಎಸ್ಟಿ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಎಸ್ಸಿ/ಎಸ್ಟಿ ಸಮಾನ ಮನಸ್ಕರು ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಸಮಾನ ಮನಸ್ಕರ ಪರವಾಗಿ ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲೂ ಸಹ ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದರು. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರ. ಇಲ್ಲಿ ಏಳು ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಬರುತ್ತವೆ.
ಕಳೆದ ಬಾರಿ ಎರಡು ಕ್ಷೇತ್ರ ಎಸ್ಸಿಗೆ, 3 ಜನ ಎಸ್ಟಿ ಹಾಗೂ ಹಿಂದುಳಿದ ಕ್ಷೇತ್ರದಲ್ಲಿ 3 ಜನ ಆಯ್ಕೆಯಾಗಿದ್ದರು. ಬೇರೆ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಹಿಂದುಳಿದ ವರ್ಗದವರು ಆಯ್ಕೆಯಾಗಿದ್ದರು. ಆದರೆ, ಈ ಬಾರಿಯ ಮೀಸಲಾತಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಎಸ್ಸಿ/ಎಸ್ಟಿಗಳಿಗೆ ಅನ್ಯಾಯ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಂದು ಕ್ಷೇತ್ರ ಸಹ ಎಸ್ಸಿ/ಎಸ್ಟಿಗೆ ಮೀಸಲಿಡದೆ ಮೀಸಲಾತಿ ಘೋಷಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಹೊಣೆ :ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಒಂದೇ ಒಂದು ಕ್ಷೇತ್ರವನ್ನು ಎಸ್ಸಿ/ಎಸ್ಟಿಗೆ ಬಾರದಂದೆ ಮಾಡಲಾಗಿದೆ. ಇದರ ಹೊಣೆಯನ್ನು ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ ನಾಯ್ಕ ಅವರೇ ಹೊರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಶೋಷಿತರ, ದಮನಿತರ ಧ್ವನಿಯಾಗಿ ಮಾನ್ಯ ಶಾಸಕರನ್ನು ಆಯ್ಕೆ ಮಾಡಲಾಗಿದೆ. ಆದರೆ, ಶಾಸಕರೇ ಈ ರೀತಿ ಅನ್ಯಾಯ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.