ಶಿವಮೊಗ್ಗ:ಲಾಕ್‍ಡೌನ್ ಸಡಿಲಿಕೆಯಾಗಿದೆ ಎಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿರುವುದು ಅಪಾಯಕಾರಿಯಾಗಿದೆ. ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಕಂಡುಬಂದರೇ ಮತ್ತೆ ಲಾಕ್‍ಡೌನ್ ಮಾಡಲಾಗುವುದೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿರು ವಲಯದಲ್ಲಿದ್ದ ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಇದೀಗ 30 ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಶಿವಮೊಗ್ಗದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ವರದಿಯಾದರೆ, ಇಡೀ ನಗರದಲ್ಲಿ ಪುನಃ ಲಾಕ್‍ಡೌನ್ ಕಠಿಣಗೊಳ್ಳಲಿದೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ಜನರು ಇದನ್ನು ಅರಿತುಕೊಂಡು ಅಗತ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು. ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಮನವಿ ಮಾಡಿದರು. ಇನ್ನೂ ಹೊರ ಜಿಲ್ಲೆಗಳಿಗೆ ತೆರಳಲು ಬಯಸುವವರಿಗೆ ಒನ್ ವೇ ಪಾಸ್ ನೀಡಲಾಗುವುದು. ಇದೇ ರೀತಿ ಬೇರೆ ಕಡೆ ಸಿಲುಕಿರುವವರನ್ನು ಹೋಗಿ ಕರೆದುಕೊಂಡು ಬರಲು ಸಹ ಪಾಸ್ ನೀಡಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತ್ರವಲ್ಲದೆ, ತಾಲೂಕುಗಳಲ್ಲಿ ತಹಶೀಲ್ದಾರ್ ಅವರು ಪಾಸ್ ನೀಡಲಿದ್ದಾರೆ. ಜನರು ಗೊಂದಲಗೊಳ್ಳುವ ಅಗತ್ಯವಿಲ್ಲ ಎಂದರು. ಬೇರೆ ಜಿಲ್ಲೆಗಳಿಂದ ಪಾಸ್ ಇಲ್ಲದೆ, ಅನಧಿಕೃತವಾಗಿ ಅಡ್ಡದಾರಿಯಲ್ಲಿ ಜಿಲ್ಲೆ ಪ್ರವೇಶಿಸುವವರ ಮೇಲೆ ಪೊಲೀಸ್ ಕಣ್ಗಾವಲು ಇರಿಸಲಾಗಿದೆ.
ಅಲ್ಲದೇ, ಜಿಲ್ಲೆಯಲ್ಲಿ ಪ್ರಸ್ತುತ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಮದ್ಯದಂಗಡಿಗಳಿಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಮಾತ್ರ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ, ಸೆಲೂನ್, ಬ್ಯೂಟಿಪಾರ್ಲರ್ಗಳಿಗೂ ತೆರೆಯಲು ಅನುಮತಿ ನೀಡಲಾಗಿದೆ ಎಂದು ಈಶ್ವರಪ್ಪ ತಿಳಿಸಿದ್ರು.