ಶಿವಮೊಗ್ಗ :ಕಣ್ಣು ಮಾನವನ ಅತಿ ಸೂಕ್ಷ್ಮ ಹಾಗೂ ಅತಿಮುಖ್ಯ ಅಂಗ. ಇಂತಹ ಅಂಗವನ್ನೇ ವೃದ್ಧರೊಬ್ಬರು ಕಿತ್ತು ಹಾಕಿಕೊಂಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಅದು ಈಗ ಬಹಿರಂಗವಾಗಿದೆ.
ಭದ್ರಾವತಿಯ ನ್ಯೂಟೌನ್ನ ನಿವಾಸಿ ನಂಜುಂಡಪ್ಪ (75) ಎಂಬುವರು ತಮ್ಮ ಬಲ ಕಣ್ಣನ್ನು ಕಿತ್ತು ಹಾಕಿಕೊಂಡವರು. ನಂಜುಂಡಪ್ಪ ಅವರಿಗೆ ಪ್ರತಿ ದಿನ ಊಟ ಮಾಡಿದ ಮೇಲೆ ಮನೆ ಮುಂದಿನ ಕಟ್ಟೆ ಮೇಲೆ ಕುಳಿತು ಬೀಡಿ ಸೇದುವುದು ಅಭ್ಯಾಸ.
ಕೆಲ ದಿನಗಳ ಹಿಂದೆ ಊಟ ಮುಗಿಸಿ ಮನೆ ಮುಂದೆ ಕುಳಿತು ಕೊಂಡಿದ್ದಾಗ ತಮ್ಮ ಕಣ್ಣಿಗೆ ಜಿಗಣೆಯೊಂದು ಕಚ್ಚಿದೆ ಎಂದು ಜೋರಾಗಿ ತಮ್ಮ ಕೈಯಿಂದಲೇ ಜಿಗಣೆ ಎಂದು ಕಿತ್ತು ಬಿಸಾಡಿದ್ದಾರೆ.
ಈ ವೇಳೆ ತಮ್ಮ ಮೊಮ್ಮಗನನ್ನು ಕರೆದು ಜಿಗಣೆ ಇದೆ. ಅದನ್ನು ಹೊಡೆದು ಹಾಕು ಎಂದು ಹೇಳಿದ್ದಾರೆ. ರಾತ್ರಿ ಕತ್ತಲಾಗಿದ್ದರಿಂದ ಸರಿಯಾಗಿ ಕಾಣಿಸದೆ ಮೊಮ್ಮಗ ಕೋಲಿನಿಂದ ಜಿಗಣೆ ಎಂದು ಹೊಡೆದು ಹಾಕಿದ್ದಾನೆ.
ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ನಂಜುಂಡಪ್ಪನವರ ಮಗ, ತಮ್ಮ ತಂದೆಯ ಕಣ್ಣಿನಿಂದ ರಕ್ತ ಬರುತ್ತಿರುವುದನ್ನು ಕಂಡು ವಿಚಾರಿಸಿದ್ದಾರೆ. ಆಗ ನಂಜುಂಡಪ್ಪ ಅವರು ಕಣ್ಣಿಗೆ ಜಿಗಣೆ ಕಚ್ಚಿತ್ತು. ಅದನ್ನು ಕಿತ್ತು ಹಾಕಿದ್ದೇನೆ ಎಂದು ತಿಳಿಸಿದ್ದಾರೆ. ನಂತರ ಮನೆ ಒಳಗೆ ಕರೆದುಕೊಂಡು ಹೋಗಿ ನೋಡಿದ ಮೇಲೆ ಕಣ್ಣಿನ ಕಪ್ಪುಗುಡ್ಡೆಯನ್ನು ಕಿತ್ತು ಹಾಕಿದ್ದು ತಿಳಿದಿದೆ.
ತಕ್ಷಣವೇ ನಂಜುಂಡಪ್ಪ ಅವರನ್ನು ಭದ್ರಾವತಿಯ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಂದ ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.
ಮೆಗ್ಗಾನ್ ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥರಾದ ಡಾ. ಪ್ರದೀಪ್ ಅವರು ಈಟಿವಿ ಭಾರತ್ದೊಂದಿಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದು, ಭದ್ರಾವತಿಯ ನಂಜುಂಡಪ್ಪನವರು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದರು. ಅವರು ತಮ್ಮ ಕಣ್ಣಿನ ಕಪ್ಪುಗುಡ್ಡೆಯನ್ನೆ ಕಿತ್ತುಕೊಂಡು ಚಿಕಿತ್ಸೆಗೆ ಬಂದಿದ್ದರು ಎಂಬುದನ್ನು ತಿಳಿಸಿದ್ದಾರೆ.
ಇದರಿಂದ ಅವರ ಕಣ್ಣು ಸಂಪೂರ್ಣ ಗಾಯವಾಗಿತ್ತು. ಅವರನ್ನು ನಾಲ್ಕೈದು ದಿನ ನಮ್ಮ ಆಸ್ಪತ್ರೆಯಲ್ಲಿಯೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಅವರು, ಮತ್ತೆ ಒಂದು ವಾರ ಬಿಟ್ಟು ಬಂದು ಮತ್ತೆ ಪರೀಕ್ಷಿಸಿಕೊಂಡು ಹೋಗಿದ್ದಾರೆ. ಸದ್ಯ ಅವರಿಗೆ ಕಣ್ಣಿನ ದೃಷ್ಟಿ ಇಲ್ಲ. ಆದರೆ, ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಓದಿ:ದಿವ್ಯಾಂಗ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಪೂರೈಸಲು ಹೈಕೋರ್ಟ್ ಆದೇಶ