ಶಿವಮೊಗ್ಗ :ಅಂದು ಮಹಾತ್ಮ ಗಾಂಧೀಜಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಅದೇ ರೀತಿ ಇವಾಗ ನರೇಂದ್ರ ಮೋದಿ ಅವರು ಇಂದು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಹೊಳಲೂರು ಗ್ರಾಮ ಪಂಚಾಯತ್‌ನಲ್ಲಿ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟಿಸಿ ಮಾತನಾಡಿ ಅವರು, ಮೋದಿಯವರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ದೇಶದಲ್ಲಿ 10 ಕೋಟಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಹೆಣ್ಣು ಮಕ್ಕಳು ಶೌಚಾಲಯಕ್ಕೆ ಬೀದಿಯನ್ನು ಅವಲಂಬಿಸಿರುವುದು ನಾವು ನಾಚಿಕೆ ಪಡುವಂತಹ ವಿಷಯ.
ಪ್ರತಿ ಗ್ರಾಮ ಪಂಚಾಯತ್‌ಗೆ ₹20 ಲಕ್ಷ ನೀಡಲಾಗುತ್ತಿದೆ. ಕಸ ವೈಜ್ಞಾನಿಕ ವಿಂಗಡಣೆಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. 271 ಗ್ರಾಮ ಪಂಚಾಯತ್‌ಗಳಿಗೆ ಸ್ವಚ್ಛ ಸಂಕೀರ್ಣ ಘಟಕಕ್ಕೆ ಭೂಮಿ ಮಂಜೂರು ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಲಾಗಿದೆ.
ಇದೀಗ ಪ್ರತಿ ಮನೆಯ ಬಚ್ಚಲು ನೀರಿನ ಸಮರ್ಪಕ ವಿಲೇವಾರಿಗೆ ಬಚ್ಚಲು ಗುಂಡಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿಯಿಂದಾಗಿ ಪರಿಸರ ಸ್ವಚ್ಛವಾಗಿಡಲು ಸಾಧ್ಯವಾಗಲಿದೆ. ಸ್ಥಳೀಯವಾಗಿ ಗ್ರಾಮ ಪಂಚಾಯತ್‌ಗಳಿಗೆ ಆದಾಯ ಸಂಗ್ರಹಿಸಲು ಸಹ ಅವಕಾಶವಾಗಲಿದೆ ಎಂದರು.