ಶಿವಮೊಗ್ಗ: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿಚಾರದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪೊಲೀಸರು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿದ್ದಾರೆ. ಕೋರ್ಟ್ ಹೇಳಿದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಮುರುಘಾ ಶ್ರೀಗಳ ಪ್ರಕರಣ ಈಗ ಕೋರ್ಟ್ನಲ್ಲಿದೆ. ಇದರಿಂದ ನಾನು ಹೆಚ್ಚಿಗೆ ಏನೂ ಮಾತನಾಡುವುದಿಲ್ಲ. ಮುರುಘಾಮಠಕ್ಕೆ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ. 7 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿದ್ದು, ನಮ್ಮ ಕಾರ್ಯಕರ್ತರಿಗೆ ಒಂದು ರೀತಿಯ ಉಲ್ಲಾಸ ತಂದಿದೆ. ಮೋದಿ ಅವರಿಗೆ ರಾಜ್ಯದ ಬಗ್ಗೆ ವಿಶೇಷ ಆಸಕ್ತಿ ಇದೆ. ಇದರಿಂದ ಅವರು ಮುಂದೆ ರಾಜ್ಯಕ್ಕೆ ತಿಂಗಳಿಗೊಮ್ಮೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಬಿಜೆಪಿಯವರು ಯಾವಾಗಲೂ ಚುನಾವಣೆಗೆ ಸಿದ್ದರಾಗಿರುತ್ತೇವೆ ಎಂದರು.
ಸೆಪ್ಟಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ರಾಜ್ಯ ಸರ್ಕಾರದಿಂದ ಜನೋತ್ಸವ ಕಾರ್ಯಕ್ರಮ ನಡೆಸುತ್ತೇವೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರೆ. ಆದರೆ, ಮಾಜಿ ಸಿಎಂ ಆಗಿ ಕುಮಾರಸ್ವಾಮಿ, ಮೋದಿ ಭೇಟಿ ಕುರಿತು ಟೀಕೆ ಮಾಡುವುದು ಸರಿಯಲ್ಲ. ಮಳೆ ಹಾನಿಯ ಕುರಿತು ಸರ್ಕಾರ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಿದೆ ಎಂದರು.