ಶಿವಮೊಗ್ಗ :ನೂರಾರು ಕ್ರೀಡಾಪಟುಗಳ ಬಾಳಿಗೆ ಬೆಳಕಾಗಬೇಕಾಗಿದ್ದ ಕ್ರೀಡಾಂಗಣ ಸರಿಯಾದ ಕಾಮಗಾರಿ ವ್ಯವಸ್ಥೆ ಕಾಣದೇ, ಶಿಥಿಲಾವಸ್ಥೆಗೆ ತಲುಪಿದೆ. ಈ ಕ್ರೀಡಾಂಗಣದ ಮೇಲೆ ಹಲವಾರು ನಿರೀಕ್ಷೆಗಳಿದ್ದವು. ಕ್ರೀಡಾಪಟುಗಳಿಗೆ ಸಹಕಾರಿಯಾಗುತ್ತೆ. ಅಲ್ಲಿ ಪ್ರಾಕ್ಟೀಸ್ ಮಾಡಬಹುದು. ಕ್ರೀಡಾಕೂಟ ನಡೆಸಬಹುದೆಂದು ಹತ್ತಾರು ಕನಸು ಕಾಣಲಾಗಿತ್ತು. ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಈ ಕ್ರೀಡಾಂಗಣದ ಕಾಮಗಾರಿ ಆರಂಭವಾಗಿದೆ ಹೊರತು, ಮುಗಿಯುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.
ಸಹ್ಯಾದ್ರಿ ಕಾಲೇಜು ಕ್ಯಾಂಪಸ್ನ ಈ ಕ್ರೀಡಾಂಗಣ ಕಾಮಗಾರಿ ಆರಂಭದಲ್ಲಿಯೇ, ಸ್ಥಗಿತಗೊಂಡಿದ್ದು, ಸುಮಾರು 8ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣ ಸುಸಜ್ಜಿತವಾಗಿ ನಿರ್ಮಾಣಗೊಂಡರೆ, ಇಂತಹ ಭವ್ಯ ಕ್ರೀಡಾಂಗಣ ಮತ್ತೊಂದಿಲ್ಲ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಬರೋಬ್ಬರಿ 12-13 ವರ್ಷಗಳಿಂದ ಕಾಮಗಾರಿ ಆಮೆ ವೇಗದಲ್ಲಿ ಸಾಗಿದೆ.
ಸಹ್ಯಾದ್ರಿ ಕಾಲೇಜು ಮತ್ತು ಕುವೆಂಪು ವಿವಿ ವತಿಯಿಂದ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕಾಮಗಾರಿ ಕುಂಟುತ್ತಾ ಸಾಗಿದ್ದು, ಸದ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅಲ್ಲಿ ಇಲ್ಲಿ, ನಡೆದಿದ್ದ ಕಾಮಗಾರಿಗಳು ಕೂಡ ಶಿಥಿಲಾವಸ್ಥೆ ತಲುಪುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಂಕ್ರೀಟಿಕರಣ ಕಾಮಗಾರಿಗಳು, ಬೃಹತ್ ಪೆವಿಲಿಯನ್, ಪ್ರೇಕ್ಷಕರು ಕುಳಿತುಕೊಳ್ಳುವ ಮೆಟ್ಟಿಲುಗಳೆಲ್ಲವೂ ನಿರ್ಮಾಣ ಹಂತದಲ್ಲಿಯೇ ಸ್ಥಗಿತಗೊಳಿಸಲಾಗಿದ್ದು, ಸದ್ಯ ನಾಯಿ, ದನ, ಹಂದಿಗಳ ವಾಸಸ್ಥಾನವಾಗಿ ಮಾರ್ಪಾಡಾಗಿದೆ. ಅಲ್ಲದೇ, ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
13 ವರ್ಷ ಕಳೆದರೂ ಮುಗಿಯದ ಕ್ರೀಡಾಂಗಣದ ಕಾಮಗಾರಿ 2002ರಲ್ಲಿ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಫ್ರೋ. ಹೂವಯ್ಯ ಗೌಡರ ಅವಧಿಯಲ್ಲಿ ಈ ಕ್ರೀಡಾಂಗಣದ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತಾದರೂ, ನಂತರದಲ್ಲಿ, 2006 ರಲ್ಲಿ, ಸುಮಾರು 9 ಕೋಟಿ ರೂ. ವೆಚ್ಚದಲ್ಲಿ, ಕ್ರೀಡಾಂಗಣ ಕಾಮಗಾರಿ ಆರಂಭಿಸಲಾಗಿತ್ತು. ಅಂದಿನಿಂದ ಕುಂಟುತ್ತಾ ಸಾಗಿದ ಕಾಮಗಾರಿ, 2012 ರಲ್ಲಿ, ಸೂಕ್ತ ಅನುದಾನವಿಲ್ಲದೆ ನಿಂತೇ ಹೋಗಿದೆ. ಅದರಂತೆ, ನಂತರದ ದಿನಗಳಲ್ಲಿ, ಸರ್ಕಾರ ಬದಲಾದಂತೆ, ಅನುದಾನದ ಕೊರತೆಯುಂಟಾಗಿ, ಇದೀಗ ಈ ಕ್ರೀಡಾಂಗಣ ನಿರ್ಜೀವ ಸ್ಥಿತಿಗೆ ತಲುಪಿದೆ.
ಇರುವ ಮೈದಾನದಲ್ಲಿ, ನೆಟ್ ಹಾಕಿಕೊಂಡು ಸ್ಥಳಿಯ ಕ್ರೀಡಾಪಟುಗಳು ಪ್ರಾಕ್ಟಿಸ್ ಮಾಡುತ್ತಿದ್ದಾರೆಯೇ ಹೊರತು, ಈ ಕ್ರೀಡಾಂಗಣ ಸಂಪೂರ್ಣ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಲಾಗುತ್ತಿಲ್ಲ. ನಗರದ ನೆಹರೂ ಕ್ರೀಡಾಂಗಣವನ್ನೇ ಅವಲಂಬಿಸಿರುವ ನಗರದ ನಾಗರೀಕರಿಗೆ, ಕ್ರೀಡಾಪಟುಗಳಿಗೆ, ಈ ಕ್ರೀಡಾಂಗಣದ ಲಭ್ಯತೆ ಇಲ್ಲದೇ ಇರುವುದು, ಬೇಸರ ಮೂಡಿಸಿದೆ.