ಶಿವಮೊಗ್ಗ:ಮನೆಗೆ ವಿದ್ಯುತ್ ಸಂಪರ್ಕ ನೀಡದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ರೈತನೋರ್ವ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈತ ಪ್ರತಿ ನಿತ್ಯ ಮನೆಯಿಂದ ಮಿಕ್ಸಿ ತಂದು ಮೆಸ್ಕಾಂ ವಿತರಣಾ ಕೇಂದ್ರದಲ್ಲಿಯೇ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾನೆ. ಈ ಘಟನೆ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮಂಗೂಟೆ ನಿವಾಸಿ ಹನುಮಂತಪ್ಪ ಎಂಬುವರು ಪ್ರತಿನಿತ್ಯ ಮೆಸ್ಕಾಂ ವಿತರಣಾ ಕೇಂದ್ರಕ್ಕೆ ಬಂದು ಮಸಾಲೆ ರುಬ್ಬಿಕೊಂಡು ಹೋಗುತ್ತಿರುವ ವ್ಯಕ್ತಿ. ಹನುಮಂತಪ್ಪ ಈ ರೀತಿ ಪ್ರತಿನಿತ್ಯ ಮಾಡುತ್ತಿದ್ರೂ, ಯಾವ ಅಧಿಕಾರಿಗಳು ಅವರನ್ನು ಪ್ರಶ್ನೆ ಮಾಡುತ್ತಿಲ್ಲವಂತೆ.
ಹನುಮಂತಪ್ಪ ಮಂಗೂಟೆ ಗ್ರಾಮದ ತಮ್ಮದೇ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಈತ ಮನೆ ನಿರ್ಮಾಣ ಮಾಡಿಕೊಂಡ ಮೇಲೆ ಮನೆಗೆ ವಿದ್ಯುತ್ ಸಂಪರ್ಕ ನೀಡಿ ಎಂದು ಆನವೇರಿ ಸೇರಿದಂತೆ ಹೊಳೆಹೊನ್ನೂರಿನ ಎಲ್ಲಾ ಮೆಸ್ಕಾಂ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರು. ಆದರೆ ಯಾರೂ ಸಹ ಇವರಿಗೆ ಸರಿಯಾಗಿ ಸ್ಪಂದಿಸಿಲ್ಲವಂತೆ. ಅಲ್ಲದೆ ಸಂಪರ್ಕ ನೀಡಲು ಹಣವನ್ನು ಕೇಳಿದ್ದಾರೆ. ಇದಕ್ಕೆ ಹನುಮಂತಪ್ಪ ನಾನು ಹಣ ನೀಡಲ್ಲ, ನೀವೇ ಸಂಪರ್ಕ ನೀಡಬೇಕು. ಹಾಲಿ ತಮಗೆ ಐಪಿ ಸೆಟ್ನ ಮೆಸ್ಕಾಂ ಸಂಪರ್ಕವನ್ನು ಬಿಟ್ಟು ಮನೆಗೆ ಬೇರೆಯದೆ ಆದ ಸಂಪರ್ಕ ನೀಡಿ ಎಂದು ಕೇಳಿದ್ರು ಯಾವ ಅಧಿಕಾರಿಯೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.
ಕೊನೆಗೆ ಹನುಮಂತಪ್ಪ ಮನೆಯಲ್ಲಿ ಅಡುಗೆ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದಾಗ, ನಮ್ಮ ಕಚೇರಿಗೆ ಬಂದು ಮಸಾಲೆ ರುಬ್ಬಿಕೊಂಡು ಹೋಗಿ ಎಂದು ಮೆಸ್ಕಾಂ ಸಿಬ್ಬಂದಿಯೇ ಹೇಳಿದ್ದಾರಂತೆ. ಹಾಗಾಗಿ ಹನುಮಂತಪ್ಪ ಕಳೆದ ಐದಾರು ತಿಂಗಳಿನಿಂದ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ. ಹನುಮಂತಪ್ಪ ಜೊತೆ ಅವರ ತಾಯಿ, ಅಕ್ಕ, ಪತ್ನಿ ಹಾಗೂ ಮಕ್ಕಳು ವಾಸವಾಗಿದ್ದಾರೆ. ಇದರಿಂದ ನಮಗೆ ವಿದ್ಯುತ್ ಸಂಪರ್ಕದ ಅವಶ್ಯಕತೆ ಇದೆ. ಕಳೆದ ಆರು ತಿಂಗಳ ಹಿಂದೆ ಸಾಮಾನ್ಯ ವಿದ್ಯುತ್ ಸಂಪರ್ಕ ಇತ್ತು. ನಂತರ ಗ್ರಾಮಕ್ಕೆ ಹೊಸದಾಗಿ ನಿರಂತರ ಜ್ಯೋತಿ ಸಂಪರ್ಕ ನೀಡಲಾಗಿದೆ. ಅಂದಿನಿಂದ ಹನುಮಂತಪ್ಪ ಮನೆಗೆ ವಿದ್ಯುತ್ ಕಡಿತಗೊಂಡಿದೆಯಂತೆ.