ಶಿವಮೊಗ್ಗ : ಹೊಸ ಪಠ್ಯ ಪುಸ್ತಕ ಮುದ್ರಣವಾಗಿದ್ದು, ಅದಷ್ಟು ಬೇಗ ಮಕ್ಕಳಿಗೆ ಪಠ್ಯ ಪುಸ್ತಕವನ್ನು ವಿತರಣೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ಆಗಿದೆ. ಹೊಸ ಪುಸ್ತಕವನ್ನು ಮಕ್ಕಳಿಗೆ ಅದಷ್ಟು ಬೇಗ ವಿತರಣೆ ಮಾಡುತ್ತೇವೆ. ಶಿಕ್ಷಣ ಇಲಾಖೆಯಲ್ಲಿನ ಸುಧಾರಣೆಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಇಲಾಖೆಯನ್ನು ಹಂತಹಂತವಾಗಿ ಸುಧಾರಣೆ ಮಾಡುತ್ತೇವೆ. ರಾಜ್ಯದಲ್ಲಿ ಶಿಕ್ಷಣ ಇಲಾಖೆ ದೊಡ್ಡ ಇಲಾಖೆಯಾಗಿದೆ. ರಾಜ್ಯದಲ್ಲಿ 45,000 ಶಾಲೆ ಕಾಲೇಜುಗಳಿವೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯ ಸಮಸ್ಯೆ ಇದೆ. ಆದಷ್ಟು ಬೇಗ ಶಿಕ್ಷಕರ ನೇಮಕಾತಿ ಜೊತೆಗೆ ಅತಿಥಿ ಶಿಕ್ಷಕರ ನೇಮಕಾತಿಯನ್ನೂ ನಡೆಸುತ್ತೇವೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಮಕ್ಕಳ ಶೂ ಸಾಕ್ಸ್ ಗೆ ಕಡಿಮೆ ಅನುದಾನ ವಿಚಾರ : ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡುತ್ತಿರುವುದು ಒಳ್ಳೆ ರೀತಿಯಲ್ಲಿ ನಡೆಯುತ್ತಿದೆ. ಇದರ ಜೊತೆಗೆ ಮೊಟ್ಟೆ ಕೊಡುವುದನ್ನು ಈಗಾಗಲೇ ನಾವು ಶುರು ಮಾಡಿದ್ದೇವೆ. ಮುಂಬರುವ ಜುಲೈ 7 ರಂದು ಹೊಸ ಸುದ್ದಿಯೊಂದನ್ನು ಕೊಡುತ್ತೇವೆ. ಗಂಡುಮಕ್ಕಳಿಗೆ ಸೈಕಲ್ ಕೊಡಲು ಬಜೆಟ್ ಸೇರಿಸಲು ಚರ್ಚಿಸಿದ್ದೇವೆ. ಹೀಗಿರುವ ಸಂದರ್ಭದಲ್ಲಿ ಎಷ್ಟು ಆಗುತ್ತೊ ಅಷ್ಟು ಈ ಬಗ್ಗೆ ಕ್ರಮ ವಹಿಸಲಿದ್ದೇವೆ. ಈಗಾಗಲೇ ಆರ್ಥಿಕ ವರ್ಷ ಕಳೆದು 4 ತಿಂಗಳಾಗಿದೆ. ಹಾಗಾಗಿ ಮಧ್ಯಂತರವಾಗಿ ಹೇಗೆ ಸೈಕಲ್ ಕೊಡುವುದು ಎಂಬುದನ್ನು ಸಿದ್ದರಾಮಯ್ಯ ಅವರು ಮಾಹಿತಿ ಪಡೆದಿದ್ದಾರೆ ಎಂದು ಮಧು ಬಂಗಾರಪ್ಪ ವಿವರಿಸಿದರು.