ಶಿವಮೊಗ್ಗ :ಪ್ರತಿ ಸಲವೂ ಒಂದಲ್ಲ ಒಂದು ಎಡವಟ್ಟು ಮಾಡುವ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ ಹಾಗೂ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಗಳು ಈ ಬಾರಿಯೂ ಕನ್ನಡ ವಿಷಯದ ಸಹಾಯಕ ಪ್ರಾಧ್ಯಪಕ ಆಕಾಂಕ್ಷಿ ಹಾಗೂ ಜೂನಿಯರ್ ರಿಸರ್ಚ್ ಫೆಲೋಷಿಪ್ ಪಡೆದು ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ಕೈಗೊಳ್ಳುವ ಅಭ್ಯರ್ಥಿಗಳ ಭವಿಷ್ಯಕ್ಕೆ ಸಂಚಕಾರ ತರಲು ಹೊರಟಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ನಿರಂತರವಾಗಿ ಅನ್ಯಾಯ ಆಗುತ್ತಲೇ ಇದೆ. ಕಳೆದ ಬಾರಿ ಎನ್ಟಿಎ ನಡೆಸಿದ ನೆಟ್ ಎಕ್ಸಾಂನ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಹಿಂದಿಯಲ್ಲಿ ನೀಡುವ ಮೂಲಕ ಅನ್ಯಾಯ ಮಾಡಿತ್ತು. ಜೊತೆಗೆ ಪರೀಕ್ಷಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ತಲೆದೋರಿ ಅಭ್ಯರ್ಥಿಗಳು ಉತ್ತರಿಸಿದ್ದನ್ನು ಸೇವ್ ಮಾಡಲು ಆಗದೇ ತಾಂತ್ರಿಕ ಸಮಸ್ಯೆ ಉಂಟಾಗಿತ್ತು.
ಬಳಿಕ ಹಲವು ಕಡೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರ ಪರಿಣಾಮವಾಗಿ ಎನ್ಟಿಎ ಮರು ಪರೀಕ್ಷೆ ಕೂಡ ನಡೆಸಿತ್ತು. ಈ ವರ್ಷ ಕೂಡ ಎನ್ಟಿಎ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಇಂದು ಐಚ್ಛಿಕ ಕನ್ನಡ ವಿಷಯದ ಪರೀಕ್ಷೆ ನಡೆಸಿದೆ. ಆದರೆ ಪರೀಕ್ಷೆಗೂ ಒಂದು ವಾರ ಮೊದಲಾದರೂ ಹಾಲ್ ಟಿಕೇಟ್ ನೀಡಬೇಕಿದ್ದ ಎನ್ಟಿಎ ಸೆಪ್ಟೆಂಬರ್ 30ರ ತಡರಾತ್ರಿವರೆಗೂ ಹಾಲ್ ಟಿಕೆಟ್ ನೀಡಿದ್ದರಿಂದಾಗಿ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ.