ರಾಷ್ಟ್ರೀಯ ಹೆದ್ದಾರಿಯಿಂದ ಸಮಸ್ಯೆ ಎದುರಿಸುತ್ತಿರುವ ಸಂತ್ರಸ್ತ ಪುಟ್ಟನಾಯಕ ಅವರು ಮಾತನಾಡಿದರು ಶಿವಮೊಗ್ಗ: ಹೊಸನಗರದ ಕುಟುಂಬವೊಂದಕ್ಕೆ ರಾಷ್ಟ್ರೀಯ ಹೆದ್ದಾರಿ ಶಾಪವಾಗಿ ಕಾಡತೊಡಗಿದೆ. ಹೊಸನಗರ ತಾಲೂಕಿನ ಅಡಗೋಡಿ ಗ್ರಾಮದ ಪುಟ್ಟ ನಾಯಕ ಅವರ ನಿರ್ಮಾಣದ ಹಂತದ ಮನೆಯನ್ನೇ ರಾಷ್ಟ್ರೀಯ ಹೆದ್ದಾರಿ ಈಗ ಅಪೋಷಣ ಪಡೆಯುತ್ತಿದೆ.
ನೂತನವಾಗಿ ನಿರ್ಮಾಣವಾಗುತ್ತಿರುವ ರಾಣೆಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ ಹೊಸನಗರ ಪಟ್ಟಣದ ಹೊರ ಭಾಗದಿಂದ ಹಾದು ಹೋಗುತ್ತಿದೆ. ಪಟ್ಟಣದಲ್ಲಿ ಹೆಚ್ಚಿನ ಪರಿಹಾರ ನೀಡಬೇಕಾಗುತ್ತದೆ ಎಂದು ಪಟ್ಟಣದ ಹೊರಭಾಗದಲ್ಲಿ ಹೋಗುವಂತೆ ಮಾಡಲಾಗಿದೆ. ಇದು ಪುಟ್ಟ ನಾಯಕ ಎಂಬುವರ ಕುಟುಂಬಕ್ಕೆ ಮುಳುವಾಗಿ ಕಾಡುತ್ತಿದೆ.
ಪುಟ್ಟ ನಾಯಕನ ಕುಟುಂಬ ಶರಾವತಿ ಮುಳುಗಡೆ ಪ್ರದೇಶದಿಂದ ಬಂದವರಾಗಿದ್ದಾರೆ. ಇವರು ಬಗರ್ ಹುಕುಂ ಅರ್ಜಿ ಸಲ್ಲಿಸಿದ್ದ ಕಳೆದ ಹಲವು ವರ್ಷಗಳಿಂದ ಇದೇ ಜಾಗದಲ್ಲಿ ವಾಸವಾಗಿದ್ದಾರೆ. ಮನೆಯ ಜಾಗಕ್ಕೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಹಳೆಯ ಮನೆ ಬಿದ್ದು ಹೋಗಿರುವುದರಿಂದ ಹೊಸಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ಮನೆಯು ಆರ್ಸಿಸಿ ಮಟ್ಟಕ್ಕೆ ಬಂದು ನಿಂತಿದೆ.
ಈಗಾಗಲೇ ಇದಕ್ಕೆ ಸುಮಾರು 11 ಲಕ್ಷ ರೂಪಾಯಿ ವ್ಯಯಿಸಿದ್ದಾರೆ. ಈಗ ರಾಷ್ಟ್ರೀಯ ಹೆದ್ದಾರಿ ಬರುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಪುಟ್ಟನಾಯಕನ ಮನೆಯ ಮುಂಭಾಗದಲ್ಲಿ ರಸ್ತೆ ನಿರ್ಮಾಣದ ಕಲ್ಲನ್ನು ಹಾಕಿದ್ದಾರೆ. ಕಲ್ಲು ಹಾಕಿರುವ ಎಡ ಹಾಗೂ ಬಲ ಭಾಗದಲ್ಲಿ ನೂರು ಅಡಿ ರಸ್ತೆ ನಿರ್ಮಾಣವಾಗಲಿದೆ.
ಮನೆ ಸಂಪೂರ್ಣ ರಸ್ತೆ ಪಾಲಾಗುತ್ತದೆ:ಇದರಿಂದ ಪುಟ್ಟ ನಾಯಕರ ಮನೆಯ ಬಹುಭಾಗ ರಸ್ತೆಗೆ ಹೋಗುವುದರಿಂದ, ಮನೆ ಸಂಪೂರ್ಣ ರಸ್ತೆ ಪಾಲಾಗುತ್ತದೆ. ಹೀಗಾಗಿ ಬದುಕಿಗೆ ಆಸರೆ ಆಗಬೇಕಾದ ಮನೆಯೇ ಇಲ್ಲದೆ ಇರುವುದು ಪುಟ್ಟ ನಾಯಕರ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಪುಟ್ಟ ನಾಯಕ ಅವರಿಗೆ ಪತ್ನಿ, ಮಗ, ಸೊಸೆ ಇದ್ದು ನಾಲ್ಕು ಜನಕ್ಕೆ ಈಗ ನೆಲೆಸಲು ಸೂರು ಇಲ್ಲದಂತಾಗಿದೆ.
ಸಾಲ ಮಾಡಿ ಮನೆ ನಿರ್ಮಾಣಕ್ಕೆ ಕುತ್ತು: ಪುಟ್ಟ ನಾಯಕ ಹಾಗೂ ಅವರ ಮಗ ವೆಂಕಟೇಶ ತಮ್ಮಲ್ಲಿದ್ದ 5 ಲಕ್ಷ ರೂ. ಹಣದ ಜೊತೆ 6 ಲಕ್ಷ ರೂ. ಸಾಲ ಮಾಡಿ ಸುಮಾರು 11 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು ಆರ್ಸಿಸಿ ತನಕ ನಿರ್ಮಿಸಲಾಗಿದೆ. ಆದರೆ ಈಗ ಪುಟ್ಟನಾಯಕನ ಕುಟುಂಬ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದೆ.
ಸೇತುವೆ ನಿರ್ಮಾಣ ಮಾಡಬೇಕಾಗುತ್ತದೆ: ಮೊದಲು ನಿರ್ಮಾಣವಾಗುತ್ತಿರುವ ನಮ್ಮ ಮನೆಯಿಂದ ನೂರು ಅಡಿ ದೂರದಲ್ಲಿ ಮನೆ ನಿರ್ಮಾಣವಾಗುತ್ತದೆ ಎಂದರು. ಇದರಿಂದ ನಿಮ್ಮ ಮನೆಗೆ ಏನೂ ಸಮಸ್ಯೆ ಆಗಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಇಂಜಿನಿಯರ್ಗಳು ತಿಳಿಸಿದ್ದರು. ಆದರೆ, ಈಗ ಮನೆ ಮುಂದೆಯೇ ಕಲ್ಲು ತಂದು ಹಾಕಿದ್ದಾರೆ. ನಾವು ಮನೆಯ ಫೌಂಡೇಷನ್ ಹಾಕುವಾಗ ಮನೆ ಕಟ್ಟಲು ಅಭಯ ನೀಡಿದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಪೀರ್ ಸಾಬ್ ಅವರು ಈಗ ಇಲ್ಲ. ಬೇರೆ ಕಡೆ ತೆಗೆದುಕೊಂಡು ಹೋದ್ರೆ, ಸೇತುವೆ ನಿರ್ಮಾಣ ಮಾಡಬೇಕಾಗುತ್ತದೆ.
ಸರ್ಕಾರವೇ ಸತ್ತಂತೆ ಆಗಿದೆ:ಈಗ ಇರುವ ಮಾರ್ಗದಲ್ಲಿ ಆದ್ರೆ ಯಾವ ಸೇತುವೆ ನಿರ್ಮಾಣ ಬೇಡ. ಇದರಿಂದ ಇಲ್ಲೇ ರಸ್ತೆ ಬರುತ್ತದೆ ಎಂದು ಹೇಳಿದ್ದಾರೆ. ನಮಗೆ ಈ ಜಾಗ ಬಿಟ್ಟರೆ, ಬೇರೆ ಜಾಗವಿಲ್ಲ. ಹಿಂದೆ ಮುಳುಗಡೆಯಾದಾಗ ಕೆಪಿಸಿಸಿಯಿಂದ ನೀಡಿದ ದಾಖಲೆಗಳು ನಮ್ಮ ಬಳಿ ಇಲ್ಲ. ಇದರಿಂದ ನಮ್ಮ ಪಾಲಿಕೆ ಸರ್ಕಾರವೇ ಸತ್ತಂತೆ ಆಗಿದೆ ಎಂದು ಪುಟ್ಟ ನಾಯಕ ಹಾಗೂ ಮಗ ವೆಂಕಟೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಓದಿ:ಬೆಳಗಾವಿ-ರಾಯಚೂರು ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ