ಶಿವಮೊಗ್ಗ: ಟಿಪ್ಪುವನ್ನು ಪೂಜೆ ಮಾಡುವವರು ಮನೆಯಲ್ಲಿರಬೇಕು. ಶಿವಪ್ಪನಾಯಕನನ್ನು ಪೂಜಿಸುವವರು ವಿಧಾನಸೌಧದಲ್ಲಿರಬೇಕು. ಆದ್ದರಿಂದ ನೀವು ಈ ಚುನಾವಣೆಯಲ್ಲಿ ಕಮಲವನ್ನು ಅರಳಿಸಲು ಸಂಕಲ್ಪ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.
ಶಿವಮೊಗ್ಗ ಗ್ರಾಮಾಂತರ ಭಾಗದ ಪೇಜ್ ಪ್ರಮುಖರ ಸಮಾವೇಶವನ್ನು ಹೊಳಲೂರಿನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯು ರಾಜ್ಯ ರಾಜಕೀಯಕ್ಕೆ ಮತ್ತು ಸಂಘಟನೆಗೆ ಪ್ರೇರಣೆ. ನಮಗೆ ಬಂಡೆ ಒಡೆಯುವ ವಿಶ್ವಾಸವಿದೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಈ ಬಾರಿ ಸಿದ್ಧರಾಮಯ್ಯ ಮನೆಗೆ ಹೋಗುವುದು ನಿಶ್ಚಿತ. ಭಾರತ್ ಜೋಡೋ ಯಾತ್ರೆ ನಡೆಸಿದ ರಾಹುಲ್ ಗಾಂಧಿ ರಾಜಕೀಯ ನಿವೃತ್ತಿ ಪಡೆದು ಇಟಲಿಗೆ ಹೋಗ್ತಾರೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯಗೆ ಸವಾಲು ಹಾಕಿದ ಕಟೀಲ್:ಸಿದ್ದರಾಮಯ್ಯ ಮತ್ತೆ ಬಾದಾಮಿಯಲ್ಲಿ ಚುನಾವಣೆಗೆ ನಿಂತು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ನಮ್ಮಲ್ಲಿ ಪೇಜ್ ಪ್ರಮುಖರು ಎಂದರೆ ಸೇನಾನಿಗಳ ತಂಡ. ಬಿಜೆಪಿ ಅಧಿಕಾರಕ್ಕೆ ತರಲು ಸೇನಾನಿಗಳೇ ಕಾರಣ. ಈ ಬಾರಿ ಸಿದ್ದರಾಮಣ್ಣನನ್ನು ಅಧಿಕಾರಕ್ಕೆ ತರುವುದು ಬೇಡ ಎಂದು ಜನ ತೀರ್ಮಾನಿಸಿದ್ದಾರೆ. ಇನ್ನು ಸದಾ ನಿದ್ದೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎಂದು ಕಿಚಾಯಿಸಿದರು.
ಕುಮಾರಸ್ವಾಮಿ, ಸಿದ್ದರಾಮಯ್ಯ ನೇತೃತ್ವದ ಪಕ್ಷ ಇಂದು ಯಾರಿಗೂ ಬೇಕಿಲ್ಲ. ಹಲವಾರು ಯೋಜನೆಗಳನ್ನು ನೀಡಿದ ಯಡಿಯೂರಪ್ಪನವರ ಆಡಳಿತ ಬೇಕೆಂದು ಜನರು ಪಟ್ಟು ಹಿಡಿದಿದ್ದಾರೆ. ಸಿದ್ದರಾಮಯ್ಯಗೆ ಸವಾಲು ಹಾಕುತ್ತೇನೆ. ಅಭಿವೃದ್ಧಿಯ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕಟೀಲ್ ಆಹ್ವಾನಿಸಿದರು.