ಶಿವಮೊಗ್ಗ: ಶಾಸಕ ಕುಮಾರ ಬಂಗಾರಪ್ಪ ವಿರುದ್ದ ಸ್ಪರ್ಧೆ ಮಾಡಲು ನಮ್ಮ ತಂದೆ ಬಂಗಾರಪ್ಪನವರೇ ಹೇಳಿದ್ದರು ಎಂದು ಸೊರಬ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ಚುನಾವಣಾ ಅಭ್ಯರ್ಥಿಗಳ ಜೊತೆ ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈಗ ನಾವು ಸಂಬಂಧದ ನಡುವೆ ಸ್ಪರ್ಧೆ ಮಾಡುತ್ತಿಲ್ಲ. ಇಲ್ಲಿ ಇತರ ಪಕ್ಷಗಳ ಅಭ್ಯರ್ಥಿಗಳಂತೆ ನಾವು ಸ್ಪರ್ಧೆ ಮಾಡುತ್ತಿದ್ದೇವೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಸೊರಬದ ನಮೋ ವೇದಿಕೆಯವರು ಕಾಂಗ್ರೆಸ್ ಸೇರಿದ್ದಾರೆ. ಸೊರಬದಲ್ಲಿ ಸುಮಾರು ಶೇ. 70ರಷ್ಟು ಬಿಜೆಪಿಯವರು ಕಾಂಗ್ರೆಸ್ ಗೆ ಬಂದಿದ್ದಾರೆ ಎಂದು ಹೇಳಿದರು.
ನನ್ನ ಹೋರಾಟದಿಂದಾಗಿ ನೀರಾವರಿ ಯೋಜನೆ ಆಗಿದೆ : ನಾನು ನೀರಾವರಿಗೆ ಹಾಗೂ ಬಗರ್ ಹುಕುಂಗಾಗಿ ಪಾದಯಾತ್ರೆ ಮಾಡಿದ್ದೆ. ಅತಿ ಹೆಚ್ಚು ಬಗರ್ ಹುಕುಂ ಹಕ್ಕುಪತ್ರ ನೀಡಿದ್ದೆ. ಬಗರ್ ಹುಕುಂ ಪತ್ರ ಪಡೆದು ಸಾಲ ಪಡೆದವರ ಹಕ್ಕುಪತ್ರವನ್ನು ರದ್ದು ಮಾಡಿದ್ದಾರೆ. ಇವರಿಗೆ ಮಾನ ಮಾರ್ಯಾದೆ ಇಲ್ಲ ಎಂದು ಪರೋಕ್ಷವಾಗಿ ಶಾಸಕ ಕುಮಾರ ಬಂಗಾರಪ್ಪ ಅವರ ವಿರುದ್ದ ವಾಗ್ದಾಳಿ ನಡೆಸಿದರು.
ನಾನು ಗೆದ್ದರೆ ಮತ್ತೆ ಹಕ್ಕುಪತ್ರ ನೀಡುತ್ತೇನೆ. ಸಿಎಂ ಬಂದು ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸಲ್ಲ ಎಂದು ಹೇಳಿದರೂ ಕೂಡ ರೈತರಿಗೆ ಭೂಗಳ್ಳರ ಹಣೆಪಟ್ಟಿಯಲ್ಲಿ ನೋಟಿಸ್ ನೀಡಲಾಗುತ್ತಿದೆ. ಮೂಡಿ, ಮೂಗೂರು ಏತ ನೀರಾವರಿಗೆ ನಾನು ಒತ್ತಾಯಿಸಿದ್ದೆ ಎಂದರು. ಈಗಿನ ಶಾಸಕರು ನೀರಾವರಿ ಸಚಿರಾಗಿದ್ದರೂ ಸಹ ನೀರಾವರಿ ಯೋಜನೆ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ: ಕಾಂಗ್ರೆಸ್ ಪಕ್ಷ ನನಗೆ ಸ್ಪರ್ಧೆ ಮಾಡಲು ಅವಕಾಶ ನೀಡಿದೆ. ಈಗಾಗಲೇ ನಾನು ರಾಜ್ಯ ಪ್ರವಾಸ ಮುಗಿಸಿದ್ದೇನೆ. ಹಿಂದುಳಿದ ವರ್ಗದ ಮತವು ಈ ಭಾರಿ ಕಾಂಗ್ರೆಸ್ ಪರವಾಗಿ ಬರುತ್ತದೆ. ಮತದಾರರು ಬದಲಾವಣೆ ಬಯಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ಮೇಲೆ ಸಾಕಷ್ಟು ಬದಲಾವಣೆ ಮಾಡಿದ್ದಾರೆ ಎಂದು ಹೇಳಿದರು.