ಶಿವಮೊಗ್ಗ: ಮೊಬೈಲ್ ಚಾರ್ಜ್‌ಗೆ ಹಾಕುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವ ಕೊಲೆಯಾಗಿದ್ದಾನೆ. ಸಾಗರ ತಾಲೂಕು ಮುರುಳ್ಳಿ ಮರಾಠಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಕಾರ್ಗಲ್ ಪೊಲೀಸರು ಆರೋಪಿಯನ್ನು 24 ಗಂಟೆಯೊಳಗೆ ಸೆರೆ ಹಿಡಿದಿದ್ದಾರೆ.
ಮುರಳ್ಳಿ ಮರಾಠಿ ಗ್ರಾಮದ ಸಿದ್ದಪ್ಪ (37) ಎಂಬಾತ ಅದೇ ಗ್ರಾಮದ ತಿಮ್ಮಪ್ಪ (57) ಎಂಬುವರ ಮನೆಗೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಹೋಗಿದ್ದ. ಈ ವಿಚಾರಕ್ಕೆ ಮನೆ ಮಾಲೀಕ ತಿಮ್ಮಪ್ಪ ಹಾಗೂ ಆತನ ಹೆಂಡತಿ ಲಕ್ಷ್ಮೀ ಜೊತೆ ಗಲಾಟೆಯಾಗಿದೆ. ಮಾತು ವಿಕೋಪಕ್ಕೆ ತಿರುಗಿ ಸಿದ್ದಪ್ಪ ತಿಮ್ಮಪ್ಪನ ಮನೆಯಲ್ಲಿದ್ದ ದೊಣ್ಣೆ ತೆಗೆದು ಮನೆಯ ಮೇಲಿನ ಡಿಶ್ ಬುಟ್ಟಿಗೆ ಹೊಡೆದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಅದೇ ದೊಣ್ಣೆಯಿಂದ ತಿಮ್ಮಪ್ಪನಿಗೂ ಹೊಡೆದು ಗಾಯಗೊಳಿಸಿದ್ದಾನೆ. ಗಾಯಾಳು ತಿಮ್ಮಪ್ಪನನ್ನು ಸಾಗರ ಆಸ್ಪತ್ರೆ ಬಳಿಕ ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಉಡುಪಿಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.