ಶಿವಮೊಗ್ಗ: ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಭದ್ರಾವತಿ ಪಟ್ಟಣದ ಹೇರಿಟೇಜ್ ಲಾಡ್ಜ್ನಲ್ಲಿ ಈ ಶವ ಪತ್ತೆಯಾಗಿದ್ದು ಪರ್ವೆಜ್ ಖಾನ್ (40) ಮೃತ ವ್ಯಕ್ತಿ. ಈತನ ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದು, ಕೊಲೆ ಮಾಡಲಾಗಿದೆ ಎಂದು ಮೃತರ ಸಂಬಂಧಿಕರು ದೂರಿದ್ದಾರೆ. ಮೃತ ಪರ್ವೆಜ್ ಖಾನ್ ಹಾಸನ ಜಿಲ್ಲೆ ಚನ್ನರಾಯನಪಟ್ಡಣ ಮೂಲದವರು ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾಡ್ಜ್ ಮ್ಯಾನೇಜರ್ ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಪರ್ವೆಜ್ ಹಾಗೂ ಓರ್ವ ಮಹಿಳೆ ರಾತ್ರಿ ಇಲ್ಲಿಗೆ ಬಂದು ಒಂದು ರೂಮ್ ಅನ್ನು ಬಾಡಿಗೆ ಪಡೆದಿದ್ದರು. ಆದರೆ, ಬೆಳಗ್ಗೆ ಬಹಳ ಹೊತ್ತಾದರೂ ರೂಮ್ನ ಬಾಗಿಲು ತೆಗೆಯದ ಕಾರಣ ಅನುಮಾನ ಬಂದಿತು. ಹಾಗಾಗಿ ಪೊಲೀಸರಿಗೆ ತಿಳಿಸಿ ಅವರ ಸಮ್ಮುಖದಲ್ಲಿಯೇ ಬಾಗಿಲು ತೆರೆದೆವು. ಈ ವೇಳೆ ಅಲ್ಲಿ ಪರ್ವಜ್ ಬೆತ್ತಲೆಯಾಗಿ ರಕ್ತದ ಮಡುವಿನಲ್ಲಿ ಮಲಗಿದ್ದು ಕಂಡು ಬಂದಿತು. ನಾವು ನೋಡಿದಾಗ ಆ ಮಹಿಳೆ ರೂಮ್ನಲ್ಲಿ ಇರಲಿಲ್ಲ. ಇದರಿಂದ ಆ ಮಹಿಳೆ ಮೇಲೆ ಅನುಮಾನ ವ್ಯಕ್ತವಾಗಿದೆ ಎಂದು ಲಾಡ್ಜ್ ಮ್ಯಾನೇಜರ್ ತಮ್ಮ ದೂರು ಪ್ರತಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ದೂರಿನ ಅನ್ವಯ ಹಳೆ ನಗರ ಪೊಲೀಸರು ಮೃತ ಪರ್ವೆಜ್ ಖಾನ್ ಅವರ ಸಂಬಂಧಿಕರನ್ನು ಪತ್ತೆ ಹಚ್ಚಿ ಲಾಡ್ಜ್ಗೆ ಕರೆತಂದಿದ್ದರು. ಮೃತನ ಕುಟುಂಬಸ್ಥರು ಬಂದು ವ್ಯಕ್ತಿಯನ್ನು ಗುರುತಿಸಿದ್ದಾರೆ. ಅಲ್ಲದೇ ನಮ್ಮ ಹುಡುಗನನ್ನು ಆ ಮಹಿಳೆಯೇ ಕೊಲೆ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಸದ್ಯ ಆ ಮಹಿಳೆ ಪೊಲೀಸರ ವಶದಲ್ಲಿದ್ದಾಳೆ.
ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಈಗಾಗಲೇ ಆ ಮಹಿಳೆಯನ್ನು ವಶಕ್ಕೆ ಪಡೆದಿದ್ದೇವೆ. ವಿಚಾರಣೆ ಸಹ ನಡೆಸಲಾಗುತ್ತಿದೆ. ಆಕೆಯ ವಿಚಾರಣೆ ಮುಗಿದ ನಂತರ ಈ ಬಗ್ಗೆ ನಿಖರ ಮಾಹಿತಿ ಒದಗಿಸುವುದಾಗಿ ಎಸ್ಪಿ ಮಿಥುನ್ ಕುಮಾರ್ ಅವರು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಹಾಸನದ ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆ:ಪರ್ವೆಜ್ ಖಾನ್ ಜೊತೆರಾತ್ರಿ ಭದ್ರಾವತಿಯ ಹೇರಿಟೇಜ್ ಲಾಡ್ಜ್ನಲ್ಲಿದ್ದ ಆ ಮಹಿಳೆ ಬೆಳಗ್ಗೆ ನೇರವಾಗಿ ಹಾಸನದ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಅಲ್ಲದೇ ಭದ್ರಾವತಿ ಲಾಡ್ಜ್ನಲ್ಲಿ ಪರ್ವೆಜ್ ಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾಳೆ. ಮಹಿಳೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಹಾಸನದ ಪೊಲೀಸರು ತಕ್ಷಣ ಭದ್ರಾವತಿಯ ಪೊಲೀಸರನ್ನು ಸಂಪರ್ಕಿಸಿ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಬಳಿಕವೇ ಕೊಲೆಯಾದ ಸ್ಥಿತಿಯಲ್ಲಿ ಪರ್ವೆಜ್ ಖಾನ್ ಶವ ಪತ್ತೆಯಾಗಿದೆ.