ಶಿವಮೊಗ್ಗ: ಆತ್ಮ ನಿರ್ಭರ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸಿ ಯೋಜನೆಗಳ ಲಾಭ ಜನಸಾಮಾನ್ಯರಿಗೆ ದೊರಕುವಂತೆ ಮಾಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಡಿಸಿಸಿ ಮತ್ತು ಡಿಎಲ್‌ಆರ್‌ಸಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕುಗಳು ರೈತರು ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು. ಕೇಂದ್ರ ಸರ್ಕಾರದ ವಿಮಾ ಯೋಜನೆಗಳು, ಆವಾಸ್ ಯೋಜನೆ, ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ ಒದಗಿಸುವ ಮುದ್ರಾ ಯೋಜನೆ ಮೊದಲಾದ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಹಾಯಧನ ಒದಗಿಸುವ ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಜಿಲ್ಲೆಯಲ್ಲಿ 5,692 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದುವರೆಗೆ 3,293 ಮಂದಿಗೆ ನೆರವು ಒದಗಿಸಲಾಗಿದೆ. ವಿಲೇವಾರಿಗೆ ಬಾಕಿಯಿರುವ ಎಲ್ಲಾ ಅರ್ಜಿಗಳನ್ನು ಮುಂದಿನ ಮೂರು ತಿಂಗಳ ಒಳಗಾಗಿ ವಿಲೇವಾರಿಗೊಳಿಸಿ, ಯೋಜನೆಯ ಲಾಭ ಪ್ರತಿಯೊಬ್ಬರಿಗೂ ಸಿಗುವುದನ್ನು ಖಾತ್ರಿಪಡಿಸಬೇಕು ಎಂದು ಹೇಳಿದರು.