ಶಿವಮೊಗ್ಗ: ನಗರದ ಕೆ.ಇ.ಬಿ ವೃತ್ತದಲ್ಲಿ ಹಳೆಯ ನೌಕರರ ಭವನದ ಆವರಣದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿದ ನಂತರ, ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅತ್ಯಾಧುನಿಕ, ಮಾದರಿ ಹಾಗೂ ಸುಸಜ್ಜಿತ ಸಭಾಭವನ ನೌಕರರ ಇತಿಹಾಸದಲ್ಲಿ ಮೈಲುಗಲ್ಲಾಗಿ ಉಳಿಯಲಿದೆ ಎಂದರು.
ನೌಕರರ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ಕಳೆದ ದಶಕಗಳ ಅವಧಿಯಲ್ಲಿ ನೌಕರರ ಸಂಘವು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಮತ್ತು ಅವಲಂಬಿತರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ನೇತೃತ್ವ ವಹಿಸಿದ ಸಂಘದ ಪದಾಧಿಕಾರಿಗಳೆಲ್ಲರ ಶ್ರಮ ಮೆಚ್ಚುವಂತದ್ದಾಗಿದೆ ಎಂದರು.
ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದ ಕಾಮಗಾರಿ ಮುಂದಿನ 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ವಿಶ್ವಾಸವಿದೆ. ನೌಕರರು ಸರ್ಕಾರ ಮತ್ತು ರಾಜ್ಯದ ಜನರ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸರ್ಕಾರದ ಬಹುತೇಕ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ನೌಕರರ ಕಾರ್ಯ ಮಹತ್ವದ್ದಾಗಿದೆ. ಸರ್ಕಾರವೂ ಕೂಡ ತನ್ನ ಆದಾಯದ ಬಹುಪಾಲನ್ನು ಆಡಳಿತ ವ್ಯವಸ್ಥೆಗೆ ವಿನಿಯೋಗಿಸುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಜೀವಮಾನವಿಡೀ ತಮ್ಮ ಅಮೂಲ್ಯ ಸಮಯವನ್ನು ಕಚೇರಿಯಲ್ಲಿಯೇ ಕಳೆದು, ನಿವೃತ್ತರಾಗುವ ನೌಕರರ ಬದುಕು ಕೂಡ ಹಸನಾಗಬೇಕು. ಅವರು ತಮ್ಮ ನಿವೃತ್ತಿಯ ಜೀವನವನ್ನು ನೆಮ್ಮದಿಯಿಂದ ಕಳೆಯುವಂತಾಗಬೇಕು. ಅದಕ್ಕಾಗಿ ಸರ್ಕಾರವು ಘೋಷಿಸಿ, ಅನುಷ್ಠಾನಕ್ಕೆ ತಂದಿರುವ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಿ, ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಲು ಎಲ್ಲಾ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದರು.
ಇದನ್ನೂ ಓದಿ : 2 ರೂಪಾಯಿಗೆ ಔಷಧ, 8 ಲಕ್ಷ ರೋಗಿಗಳ ಸೇವೆ: ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಡಾ.ಮಹೇಂದ್ರಭಾಯ್
ಬಂಜಾರ ಸಮುದಾಯ ತನ್ನದೇ ಆದ ಸಂಸ್ಕೃತಿ ಹೊಂದಿದೆ :
ಬಂಜಾರ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಜಿಲ್ಲಾ ಬಂಜಾರ ಸಂಘದಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೇರವೇರಿಸಿದ ಸಂಸದ ಬಿ.ವೈ.ರಾಘವೇಂದ್ರ, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎರಡೂ ಒಟ್ಟಿಗೆ ಸೇರಿ ಒಂದು ಅಭಿವೃದ್ದಿ ನಿಗಮ ಇತ್ತು, ಇದರಿಂದ ಅಭಿವೃದ್ದಿ ಕೆಲಸಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿದರು ಎಂದರು.