ಶಿವಮೊಗ್ಗ : ರಾಜ್ಯ ಸರ್ಕಾರದ ಬೊಕ್ಕಸ ಭರ್ತಿಯಾಗಿದೆ, ಸಿಎಂ ಯಡಿಯೂರಪ್ಪ ಹಾಗೂ ಬಿ. ವೈ. ವಿಜಯೇಂದ್ರರವರ ಮಾತಿಗೆ ಅಪಾರ್ಥ ಕಲ್ಪಿಸಬಾರದು ಎಂದು ಸಂಸದ ಬಿ. ವೈ. ರಾಘವೇಂದ್ರ ವಿನಂತಿ ಮಾಡಿ ಕೊಂಡಿದ್ದಾರೆ.
ತಾಲೂಕಿನ ಹೊಳೆಬೆನವಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದ ಖಜಾನೆ ಖಾಲಿಯಾಗುವ ಮಾತಿಲ್ಲ. ದೇವರ ದಯೆಯಿಂದ ಖಜಾನೆ ಭರ್ತಿಯಾಗಿದೆ. ಕ್ಷೇತ್ರದ ಅವಶ್ಯಕತೆಗೆ ತಕ್ಕಷ್ಟು ಅನುದಾನ ಬಿಡುಗಡೆಯಾಗುತ್ತದೆ ಎಂದು ಯಡಿಯೂರಪ್ಪನವರು ಹೇಳಿದ್ದಾರಷ್ಟೆ. ಕೇಂದ್ರ ಸರ್ಕಾರ ಯಾವುದೇ ವರದಿಯನ್ನು ತಿರಸ್ಕಾರ ಮಾಡಿಲ್ಲ. ಇದು ತಪ್ಪು ತಿಳುವಳಿಕೆಯಾಗಿದೆ ಎಂದರು.
ಕೇಂದ್ರ ಸರ್ಕಾರ ಈಗ ಪ್ರಥಮ ಹಂತದಲ್ಲಿ 1.200 ಕೋಟಿ ರೂ ಬಿಡುಗಡೆ ಮಾಡಿದೆ. ಅದಷ್ಟು ಬೇಗ ಹಂತ ಹಂತವಾಗಿ ಸಂಪೂರ್ಣ ನೆರೆ ಪರಿಹಾರವನ್ನು ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಅನುದಾನ ಬಿಡುಗಡೆ ಮಾಡುವಲ್ಲಿ ತಡವಾದ ಕಾರಣ ಸಹಜವಾಗಿಯೇ ಆಕ್ರೋಶ ವ್ಯಕ್ತವಾಗಿದೆ ಅಷ್ಟೆ ಎಂದು ಕೇಂದ್ರದ ವಿರುದ್ಧ ನೆರೆ ಪ್ರದೇಶದ ಜನರ ಹಾಗೂ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದರು.
ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ಕಾರಣ ಕೇಂದ್ರದಲ್ಲಿ ರೈತ ಪರ, ಜನ ಪರ ಹೋರಾಟ ನಡೆಸಿದ ಪ್ರಧಾನ ಮಂತ್ರಿಗಳಿದ್ದಾರೆ. ಇದರಿಂದ ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯವಾಡಿದರು.
ಕೇಂದ್ರದ ಪರಿಹಾರ ರಾಜ್ಯಗಳಿಗೆ ಹಿಂದೆ ಹೇಗೆ ಬರುತ್ತಿತ್ತು ಅಂತ ಇತಿಹಾಸವನ್ನು ನೋಡಿ. ಹಿಂದೆಲ್ಲಾ ನೆರೆ ಪರಿಹಾರ ಬರಕ್ಕೆ ಬಂದಿದೆ, ಬರ ಪರಿಹಾರ ನಿಧಿ ನೆರೆ ವೇಳೆಗೆ ಬಂದಿದೆ. ನಮ್ಮ ಸರ್ಕಾರ ಆ ರೀತಿ ಮಾಡುವುದಿಲ್ಲ ಎಂದು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.