ಶಿವಮೊಗ್ಗ :ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ಮಹಾನಗರ ಪಾಲಿಕೆಯನ್ನ ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ ಜಿಲ್ಲೆಯ ಜನತೆ ಸಂತಸ ವ್ಯಕ್ತಪಡಿಸಿದ್ದರು. ಸಾವಿರ ಕೋಟಿಯ ಕಾಮಗಾರಿ ನಗರದಲ್ಲಿ ಜಾರಿಯಾದರೆ ಶಿವಮೊಗ್ಗ ನಗರ ನೋಡಲು ಹೇಗಿರಬೇಡ ಎಂದು ಹುಬ್ಬೇರಿಸಿದ್ದರು. ಆದರೆ, ಈಗ ಸ್ಮಾರ್ಟ್ ಸಿಟಿ ಕಾಮಗಾರಿ ಕಣ್ಣಾರೆ ನೋಡುತ್ತಿರುವ ಜನರಿಗೆ ಭ್ರಮನಿರಸನವಾಗಿದೆ.
ಮಂದಗತಿಯ ಸ್ಮಾರ್ಟ್ ಸಿಟಿ ಕಾಮಗಾರಿಗೆ ಹೈರಾಣಾದ ಶಿವಮೊಗ್ಗ ಜನತೆ ನಗರದಲ್ಲಿ ಅಂದವಾಗಿದ್ದ ರಸ್ತೆ, ಚರಂಡಿ, ಫುಟ್‌ಪಾತ್‌ಗಳನ್ನು ಕಿತ್ತು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮತ್ತಷ್ಟು ಕಳಪೆ ಕೆಲಸ ಮಾಡಿ ಹಾಳುಗೆಡವಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಗಲವಾಗಿದ್ದ ರಸ್ತೆಗಳು ಕಿರಿದು ಮಾಡಿ, ಫುಟ್‌ಪಾತ್ ನಿರ್ಮಿಸಲಾಗಿದೆ.
ಭೂಗತ ಕೇಬಲ್ ಅಳವಡಿಕೆ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಮಧ್ಯಭಾಗದಲ್ಲಿ ಅಗೆಯುತ್ತಿರುವ ಗುಂಡಿಗಳು ನಗರದ ಅಂದ ಕೆಡಿಸಿಬಿಟ್ಟಿವೆ. ದೊಡ್ಡ ದೊಡ್ಡ ಗುಂಡಿಗಳು ಅಪಾಯವನ್ನುಂಟು ಮಾಡುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಾವಿನ ಮನೆ ಕದತಟ್ಟುವಂತೆ ಮಾಡುತ್ತಿವೆ ಸ್ಮಾರ್ಟ್ ಸಿಟಿ ಗುಂಡಿಗಳು :ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೇಬಲ್ ಲೈನ್‌ಗಳನ್ನು ಭೂಗತವಾಗಿ ಅಳವಡಿಸಲು ರಸ್ತೆಯ ಮಧ್ಯ ಭಾಗದಲ್ಲಿ ಗುಂಡಿಗಳನ್ನು ಅಗೆಯಲಾಗಿದೆ. ರಸ್ತೆ ಅಗೆದ ನಂತರ ಒಂದು ವಾರ ಬಿಟ್ಟು ತೊಟ್ಟಿ ಕಟ್ಟುವ ಕೆಲಸ ಮಾಡಲಾಗುತ್ತಿದೆ.
ಇನ್ಯಾವುದೋ ಒಂದು ದಿನ ಬಂದು ಸಿಮೆಂಟ್ ಕಾಂಕ್ರೀಟ್ ಮಾಡುತ್ತಾರೆ. ಅಗೆದ ಗುಂಡಿಗೆ ಸರಿಯಾಗಿ ಮಣ್ಣು ಹಾಕೋದಿಲ್ಲ. ಮಣ್ಣು ಮುಚ್ಚಿದ ಜಾಗದಲ್ಲಿ ವಾಹನಗಳು ಏನಾದ್ರೂ ನಿಂತರೂ ಸಿಲುಕಿಕೊಳ್ಳುವುದು ಗ್ಯಾರಂಟಿ ಅಂತಾರೆ ಸ್ಥಳೀಯರು.
ಮಂದಗತಿಯ ಕಾಮಗಾರಿಗೆ ಹೈರಾಣಾದ ಶಿವಮೊಗ್ಗದ ಜನ :ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳಿಂದಾಗಿ ಅವಘಡದಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಈ ಸಾವು ನೋವುಗಳಿಗೆ ಹೊಣೆ ಯಾರು ಎಂದು ಕೇಳಿದರೆ ಜನಪ್ರತಿನಿಧಿಗಳಿಂದಲೂ ಉತ್ತರವಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ ಎಸ್ ಈಶ್ವರಪ್ಪ ಕುವೆಂಪು ರಸ್ತೆಗೆ ಎರಡು ಬಾರಿ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ, ಅಧಿಕಾರಿಗಳಿಗೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.
ಆದರೆ, ಅಧಿಕಾರಿಗಳು ಉಸ್ತುವಾರಿ ಸಚಿವರ ಸೂಚನೆಗೂ ಮಾನ್ಯತೆ ನೀಡಿದಂತೆ ಕಾಣುತ್ತಿಲ್ಲ. ಸಚಿವರು ಈಗ ಕುವೆಂಪು ರಸ್ತೆಗೆ ಭೇಟಿ ನೀಡಿದರೆ ಕಾಮಗಾರಿಯ ಅಧ್ವಾನ ಸ್ಥಿತಿ ಯಾವ ಮಟ್ಟದಲ್ಲಿ ಇದೆ ಎಂದು ಅರಿವಾಗುತ್ತದೆ. ರೋಗಿಗಳನ್ನು ಹೊತ್ತು ವೇಗವಾಗಿ ಚಲಿಸುವ ಆ್ಯಂಬುಲೆನ್ಸ್‌ಗಳ ಚಾಲಕರೇ ಗುಂಡಿಗಳಿಂದ ಹೈರಾಣಾಗಿದ್ದಾರೆ. ಬೃಹದಾಕರವಾದ ಗುಂಡಿಗಳು ಸಾವನ್ನು ಕೈಬೀಸಿ ಕರೆಯುತ್ತಿವೆ.
ಟ್ರಾಫಿಕ್ ಪೊಲೀಸರ ಹೆಗಲೇರಿದೆ ಗುಂಡಿಗಳನ್ನು ಕಾಯುವ ಕೆಲಸ :ಇನ್ನು, ರಸ್ತೆ ಬದಿಯಲ್ಲಿ ಅಗೆದ ಗುಂಡಿಗಳನ್ನು ಕಾಯಬೇಕಾದ ಪರಿಸ್ಥಿತಿ ಟ್ರಾಫಿಕ್ ಪೊಲೀಸರ ಹೆಗಲೇರಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಪೊಲೀಸರು ರಕ್ಷಣೆ ನೀಡುವಂತಾಗಿದೆ. ಗುಂಡಿಗಳಿಗೆ ಬ್ಯಾರಿ ಕೇಡ್ ಹಾಕಿ ವಾಹನ ದಟ್ಟಣೆಯನ್ನು ಪ್ರತಿದಿನ ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿದೆ.
ಯಾವಾಗ ಮುಗಿಯುತ್ತಪ್ಪಾ ಈ ಕಾಮಗಾರಿ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿ ಎಂದರೆ ಸ್ಮಾರ್ಟ್ ವರ್ಕ್ ಆಗಿರಬೇಕು. ಆದ್ರೆ, ಇಲ್ಲಿ ಸ್ಮಾರ್ಟ್ ಎನ್ನುವ ಹೆಸರಿಗೆ ಅಪವಾದ ಎಂಬಂತೆ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಜನರ ಸಾವು-ನೋವುಗಳಿಗೆ ಕಾರಣವಾಗುತ್ತಿದೆ.
ಮಹಾನಗರ ಪಾಲಿಕೆ ಸದಸ್ಯರಿಗೆ ಈ ಬಗ್ಗೆ ಕೇಳಿದರೆ, ಸ್ಮಾರ್ಟ್ ಸಿಟಿ ಯೋಜನೆಗೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈಗಾಗಲೇ ಅರ್ಧ ಶಿವಮೊಗ್ಗ ತನ್ನ ನೈಜತೆಯನ್ನು ಕಳೆದುಕೊಂಡಿದೆ. ಕಾಮಗಾರಿ ಗುತ್ತಿಗೆ ಪಡೆದ ಮೊದಲ ಗುತ್ತಿಗೆದಾರ ಇತ್ತ ತಲೆ ಕೂಡ ಹಾಕೋದಿಲ್ಲ. ಸಬ್ ಕಾಂಟ್ರ್ಯಾಕ್ಟ್ ಪಡೆದ ಗುತ್ತಿಗೆದಾರ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸುವುದಿಲ್ಲ.
ಯಾರು ಗುತ್ತಿಗೆ ಪಡೆಯುತ್ತಾರೋ ಅವರೇ ಕಾಮಗಾರಿಯ್ನು ಪೂರ್ಣಗೊಳಿಸದರೆ ಯಾವ ತೊಂದರೆಯೂ ಇರೋದಿಲ್ಲ. ಆದ್ರೆ, ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಹಳ್ಳ ಹಿಡಿಯೋದಕ್ಕೆ ಕಾರಣವಾಗಿದ್ದೂ ಕೂಡ ಇದೇ ಸಬ್ ಕಾಂಟ್ರ್ಯಾಕ್ಟ್ ಎನ್ನುವ ಆರೋಪ ಕೇಳಿ ಬಂದಿವೆ. ಇನ್ನಾದರೂ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಲಿ, ಕಾಮಗಾರಿಗೆ ಚುರುಕು ಮುಟ್ಟಿಸಲಿ ಎಂಬುದು ನಗರದ ಜನತೆಯ ಆಗ್ರಹವಾಗಿದೆ.