ಶಿವಮೊಗ್ಗ:ತಾಯಿಯೊಬ್ಬರು ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಮೃತರನ್ನು ಕುಪ್ಪಗಡ್ಡೆ ಗ್ರಾಮದ ಶಾಂತಾ (28) ಹಾಗೂ ಒಂದೂವರೆ ತಿಂಗಳ ಮಗು ಎಂದು ಗುರುತಿಸಲಾಗಿದೆ.
ಶಾಂತ ಅವರನ್ನು ಸಮೀಪದ ಜಡ್ಡೆಹಳ್ಳಿ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು. ಹೆರಿಗೆಗೆ ಎಂದು ತವರು ಮನೆ ಕುಪ್ಪಗಡ್ಡೆಗೆ ಬಂದಿದ್ದು, ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವಿಗೆ ಎದೆ ಹಾಲು ಕಡಿಮೆಯಾಗಿತ್ತು. ತಾಯಿ ಹಾಲು ಇಲ್ಲದೆ ಮಗು ಸೊರಗುತ್ತಿದೆ. ಇದರಿಂದ ತನ್ನ ಮಗು ಸರಿಯಾಗಿ ಬೆಳವಣಿಗೆ ಆಗುತ್ತಿಲ್ಲ ಎಂದು ಮಾನಸಿಕವಾಗಿ ನೊಂದಿದ್ದರು. ಹಾಗಾಗಿ ಒಂದೂವರೆ ತಿಂಗಳ ಮಗು ಸಮೇತ ಗ್ರಾಮದ ತುಂಬೆಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರು ದಾಖಲಾಗಿದೆ.
ಮಗು ಹೊಂಡದಲ್ಲಿ ತೇಲುವುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಶೋಧಕಾರ್ಯ ನಡೆಸಿ ಮಹಿಳೆ ಹಾಗೂ ಮಗುವನ್ನು ಹೊಂಡದಿಂದ ಮೇಲೆತ್ತಿದ್ದಾರೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲು ನಿಲ್ದಾಣದಲ್ಲಿ ವ್ಯಕ್ತಿ ಆತ್ಮಹತ್ಯೆ: ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ ಘಟನೆ ಇತ್ತೀಚೆಗೆ ನಡೆದಿತ್ತು. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ರೈಲು ಹೊರಟ ಬಳಿಕ ಕೊನೆಯ ಪ್ಲಾಟ್ ಫಾರಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಪ್ಲಾಟ್ ಫಾರಂನ ಮೇಲ್ಛಾವಣಿಗೆ ನೇಣು ಹಾಕಿಕೊಂಡಿದ್ದು, ಈ ಭಾಗದಲ್ಲಿ ಕೆಲಸ ಮಾಡುವವರು ಶವವನ್ನು ನೋಡಿ ರೈಲ್ವೆ ಪೊಲೀಸರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ಮಾಡಿ ಶವವನ್ನು ಕೆಳಗೆ ಇಳಿಸಿ, ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದರು. ಮೃತ ವ್ಯಕ್ತಿಯನ್ನು ಸುಮಾರು 30 ವರ್ಷ ವಯಸ್ಸಿನ ಯುವಕ ಎಂದು ಅಂದಾಜಿಸಲಾಗಿದೆ. ಈತ ಯಾರು, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದರು ಎಂಬ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ.