ಶಿವಮೊಗ್ಗ:ಶಿವಮೊಗ್ಗ ತಾಲೂಕಿನ ವಿಠಲಗೊಂಡನಕೊಪ್ಪ ಗ್ರಾಮದಲ್ಲಿ ಮುಸಿಯ (ಮಂಗ ಜಾತಿಗೆ ಸೇರಿದ ಪ್ರಭೇದ) ಉಪಟಳದಿಂದ ಜನರು ಬೇಸತ್ತು ಹೋಗಿದ್ದು, ಗ್ರಾಮದ ರಸ್ತೆಗಳಲ್ಲಿ ಕಾರುಗಳು ಚಲಿಸದಂತೆ ಮಾಡುತ್ತಿದೆ. ಗ್ರಾಮಕ್ಕೆ ಕಾರುಗಳು ಬಂದರೆ ಸಾಕು ದಾಳಿಗೆ ಮುಂದಾಗುವ ಮುಸಿಯ ಕಾರಿನ ಒಳಗಿರುವವರನ್ನು ಕಚ್ಚಿ ಗಾಯಗೊಳಿಸುತ್ತಿದೆ. ಹೀಗಾಗಿ ಗ್ರಾಮಸ್ಥರು ಮುಸಿಯನನ್ನು ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಗುರುವಾರ ನಾಗರಾಜ್ ಎಂಬವರು ಗ್ರಾಮಕ್ಕೆ ಕಾರಿನಲ್ಲಿ ಬರುವಾಗ ಮುಸಿಯ ಮತ್ತೆ ದಾಳಿ ಮಾಡಿ ಬಲಗೈಗೆ ಕಚ್ಚಿ ಗಾಯಗೊಳಿಸಿದೆ. ಕಳೆದ 6 ತಿಂಗಳಿನಿಂದ ಹೀಗೆ ವಿಚಿತ್ರವಾಗಿ ವರ್ತಿಸುತ್ತಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ನಡೆದುಕೊಂಡು ಹೋಗುವವರನ್ನು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಮುಸಿಯ ಏನೂ ಮಾಡುವುದಿಲ್ಲ. ಆದರೆ ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನದಲ್ಲಿ ಬರುವವರನ್ನು ಕಚ್ಚದೆ ಬಿಡುವುದಿಲ್ಲ. ಗುರುವಾರ ಸಂಜೆ ವಿಪರೀತ ಮಳೆ ಬಂದಾಗ ಕಾರಿನಲ್ಲಿ ಬಂದವರನ್ನು ಕೆಳಗಿಳಿಯಲೂ ಬಿಡದೆ ಒಂದು ಗಂಟೆಗೂ ಅಧಿಕ ಕಾಲ ಸತಾಯಿಸಿದೆ.