ಕರ್ನಾಟಕ

karnataka

ETV Bharat / state

ಮಲೆನಾಡಲ್ಲಿ ಮಂಗನ ಕಾಯಿಲೆ ಮಟ್ಟ.. ಸಿಹಿಮೊಗೆಯ ಜನತೆಗೆ ಸಿಹಿ ತಂದ ಶಾರ್ವರೀ ಸಂವತ್ಸರ..

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ಎಂದು ಮಲೆನಾಡಿನ ಸುಂದರ ಸೊಬಗಿನ ಮಕರಂದದ ಮಧ್ಯೆ ಬದುಕು ಕಟ್ಟಿಕೊಂಡಿದ್ದ ಸಿಹಿಮೊಗೆಯ ಜನರಿಗೆ ಅದೊಂದು ಕಾಯಿಲೆ ಕಳೆದ ಹಲವಾರು ದಶಕಗಳಿಂದ ಬಿಟ್ಟು ಬಿಡದೆ ಕಾಡಿತ್ತು. 1950ರ ದಶಕದಲ್ಲಿ ಪ್ರಾರಂಭವಾಗಿದ್ದ ಈ ರೋಗ 2020ರ ದಶಕಕ್ಕೂ ಬಂದು ಮುಟ್ಟಿತ್ತು. ಆದರೆ, ಈ ಬಾರಿ ಆಗಿದ್ದೇ ಬೇರೆ..

Monkey Fever
ಮಲೆನಾಡಲ್ಲಿ ತಗ್ಗಿದ ಮಂಗನ ಕಾಯಿಲೆ

By

Published : Feb 13, 2021, 5:30 PM IST

ಶಿವಮೊಗ್ಗ :ಹಚ್ಚ ಹಸಿರಿನ ಕಾಡು, ಉತ್ತಮ ಪರಿಸರ, ತಂಪಾದ ಗಾಳಿ, ಹಕ್ಕಿಗಳ ಕಲರವದ ಮಧ್ಯೆ ವಾಸಿಸುತ್ತಿದ್ದ ಮಲೆನಾಡಿಗರಿಗೆ ನವೆಂಬರ್​​ ತಿಂಗಳು ಬಂತೆಂದರೆ ಸೂತಕದ ಛಾಯೆ ಮೂಡಿದಂತಾಗುತ್ತಿತ್ತು.

ಅದಕ್ಕೆ ಕಾರಣ ಭಯ ಭೀಕರವಾಗಿರುವ ಕ್ಯಾಸನೂರು ಫಾರೆಸ್ಟ್​ ಡಿಸೀಸ್(ಕೆಎಫ್​​ಡಿ)​ ಅರ್ಥಾತ್​ ಮಂಗನ ಕಾಯಿಲೆ. ಈ ರೋಗ ಮಲೆನಾಡಿಗರನ್ನು ಕಾಡಿರುವ ಬಗೆ ಹೇಳತೀರದು.

ಸರಿ ಸುಮಾರು ನವೆಂಬರ್​ ತಿಂಗಳಿನಿಂದ ಏಪ್ರಿಲ್​ವರೆಗೆ ಈ ಭಾಗದ ಜನರು ಜೀವ ಭಯದಲ್ಲೇ ಬದುಕುವ ಸ್ಥಿತಿಯನ್ನು ಈ ಕಾಯಿಲೆ ಉಂಟು ಮಾಡಿತ್ತು. ಏನಿದು ಮಂಗನ ಕಾಯಿಲೆ ಅಂದರೆ? ಈ ಭಾಗದ ಜನರಿಗೆ ಯಾಕಿಷ್ಟು ಭಯ?.

ಶಿವಮೊಗ್ಗ ಎಂದಾಕ್ಷಣ ಮೊದಲು ನೆನಪಾಗುವುದು ಅಲ್ಲಿನ ಸುಂದರ ವಾತಾವಾರಣ. ಹಚ್ಚ ಹಸಿರಿನಿಂದ ಕಂಗಳಿಸುವ ದಟ್ಟ ಕಾಡು, ಪ್ರಾಣಿ ಪಕ್ಷಿಗಳ ಕಲರವ, ಹರಿವ ಝರಿ - ತೊರೆಗಳ ಸದ್ದು ಎಂಥವರಾದರೂ ಪುಳಕಿತರಾಗ್ತಾರೆ.

ಇಂತಹ ಜಿಲ್ಲೆಯಲ್ಲಿ ಜೀವನಕ್ಕೇನು ಕೊರತೆ ಇಲ್ಲ, ಹೊಟ್ಟೆಗೆ ಹಿಟ್ಟುಂಟು, ವಾಸಿಸಲು ಸೂರುಂಟು ಎಂದು ಹಸಿರಿನ ಸೌಂದರ್ಯದ ಸೊಬಗಿನ ನಡುವೆ ನೆಮ್ಮದಿಯ ಜೀವನ ನಡೆಸುತ್ತಿದ್ದ ಮಲೆನಾಡಿಗರಿಗೆ ಮಂಗನ ಕಾಯಿಲೆ ಎಂಬ ಮಹಾಮಾರಿ ಮೃತ್ಯುಕೂಪವಾಗಿ ಪರಿಣಮಿಸಿತ್ತು.

ಪ್ರಾಣಿಗಳ ಮಧ್ಯೆಯೇ ವಾಸಿಸುತ್ತಿದ್ದವರಿಗೆ ಮಂಗನನ್ನು ನೋಡಿದ್ರೆ ಎದೆ ಝಲ್​​ ಎನ್ನುತ್ತಿತ್ತು. ಕೊರೊನಾ ರೋಗಕ್ಕೆ ಜಗತ್ತು ಹೇಗೆ ಬೆಚ್ಚಿ ಬಿದ್ದಿದಿಯೋ ಹಾಗೆ ಸಿಹಿಮೊಗೆಯ ಜನರು ಸಹ ಮಂಗನನ್ನು ನೋಡಿದ್ರೆ ಭಯ ಭೀತರಾಗುವ ಸ್ಥಿತಿ ಉಂಟಾಗಿತ್ತು.

ಇಡೀ ಜಗತ್ತನ್ನೇ ನಲುಗಿಸಿದ್ದ ಕೊರೊನಾಗಿಂತ ಹೆಚ್ಚಿನ ಭಯವನ್ನು ಮಂಗನ ಕಾಯಿಲೆಯಿಂದಾಗಿ ಮಲೆನಾಡಿಗರು ಅನುಭವಿಸಿದ್ದಾರೆ. 1956ರಲ್ಲಿ ಸಾಗರ ತಾಲೂಕಿನ ಕ್ಯಾಸನೂರು ಭಾಗದಲ್ಲಿ ಮೊದಲ ಬಾರಿಗೆ ಕಾಣಿಸಿದ್ದ ಈ ಕಾಯಿಲೆ ನಂತರದ ವರುಷಗಳಲ್ಲಿ ಇಡೀ ಮಲೆನಾಡನ್ನೇ ವ್ಯಾಪಿಸಿತು. ಚಳಿಗಾಲದ ಸಮಯದಲ್ಲಿ ಜ್ವರ ಬಂತೆಂದರೆ ಸಾಕು, ಇದು ಮಂಗನ ಕಾಯಿಲೆಯೇ ಸರಿ, ಮುಂದೇನು ಗತಿ ಎಂಬ ಆತಂಕ ಮಲೆನಾಡಿಗರದ್ದಾಗಿತ್ತು.

ಹಲವಾರು ದಶಕಗಳಿಂದ ಮಲೆನಾಡಿಗರನ್ನು ಇದು ಕಾಡುತ್ತಿದ್ದರೂ ಸಹ ಹೀಗೊಂದು ಕಾಯಿಲೆ ಇದೆ ಎಂಬುದು ರಾಜ್ಯದ ಬಹುತೇಕ ಜನತೆಗೆ ತಿಳಿದಿರಲಿಲ್ಲ. 2018ರ ನವೆಂಬರ್ 3ನೇ ವಾರದಲ್ಲಿ ಸಾಗರ ತಾಲೂಕಿನ ಅರಳಗೋಡು ಭಾಗದಲ್ಲಿ ಈ ಕಾಯಿಲೆ ಮತ್ತೆ ಕಾಣಿಸಿತ್ತು. ಆಗ ಬರೋಬ್ಬರಿ 12 ಜನ ಮೃತಪಟ್ಟಿದ್ದರು. ಅಲ್ಲದೆ, ಮಂಗನ ಕಾಯಿಲೆ ಇತಿಹಾಸದಲ್ಲಿಯೇ ಆ ವರ್ಷ ಅತೀ ಹೆಚ್ಚು ಮರಣ ಪ್ರಮಾಣ ದಾಖಲಾಗಿತ್ತು.

ಪ್ರತಿ ವರ್ಷವೂ ಈ ಮಾರಣಂತಿಕ ಕಾಯಿಲೆ ಬಗ್ಗೆ ಭಯ ಭೀತರಾಗುತ್ತಿದ್ದ ಮಲೆನಾಡಿಗರಿಗೆ ಈ ವರ್ಷ ಕೊಂಚ ನೆಮ್ಮದಿ ತರಿಸಿದಂತಾಗಿದೆ. ಈ ವರ್ಷ ಆರೋಗ್ಯ ಇಲಾಖೆ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ಕೆಎಫ್‌ಡಿ ಈ ಬಾರಿ ಇಲ್ಲವಾಗಿದೆ. ಸಿಹಿಮೊಗೆಯ ಜನರ ಮೊಗದಲ್ಲಿ ಮಂದಹಾಸ ತರಿಸಿದೆ.

ಮಂಗನ ಕಾಯಿಲೆ ಕುರಿತು ವಿಷೇಶ ವರದಿ

ಪ್ರತಿ ವರ್ಷ ನವೆಂಬರ್​​-ಡಿಸೆಂಬರ್ ವೇಳೆಗೆ ಶುರುವಾಗುತ್ತಿದ್ದ ಈ ಕಾಯಿಲೆಗೆ ಹತ್ತಾರು ಮಂದಿ ಬಲಿಯಾಗುತ್ತಿದ್ದರು. ಆದರೆ, ಈ ವರ್ಷ ನವೆಂಬರ್​​-ಡಿಸೆಂಬರ್​​ ಕಳೆದು ಫೆಬ್ರವರಿ ಮೊದಲ ವಾರ ಮುಗಿದರೂ ಈವರೆಗೆ ಯಾವುದೇ ಕೇಸ್‌ ಕಾಣಿಸಿಲ್ಲದಿರುವುದು ಆರೋಗ್ಯ ಇಲಾಖೆಯ ಕ್ರಮಗಳು ಫಲ ನೀಡುತ್ತಿವೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ.

ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿದ್ದ ಮಂಗನ ಕಾಯಿಲೆ, ಇತ್ತೀಚಿನ ವರ್ಷಗಳಲ್ಲಿ ಬೇರೆ ಜಿಲ್ಲೆಗಳಿಗೂ ವ್ಯಾಪಿಸಲಾರಂಭಿಸಿತ್ತು. ಶಿವಮೊಗ್ಗಕ್ಕೆ ಹೊಂದಿರುವ ಜಿಲ್ಲೆಗಳ ಜನರ ಆತಂಕಕ್ಕೂ ಕಾರಣವಾಗಿತ್ತು. ಆದರೆ, ಈ ವರ್ಷ ಸಮಯಕ್ಕೆ ಸರಿಯಾಗಿ ಮಲೆನಾಡು ಭಾಗದ ಜನರಿಗೆ ವ್ಯಾಕ್ಸಿನೇಷನ್ ನೀಡಿದ್ದರಿಂದಾಗಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಬಂದಿದೆ.

ಈವರೆಗೆ ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ಉಡುಪಿಯ 1,400 ಮಂದಿಯ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಯಾರಲ್ಲೂ ಕೆಎಫ್​ಡಿ ಪಾಸಿಟಿವ್ ಕಾಣಿಸಿಲ್ಲ. ಕೆಎಫ್‌ಡಿ ಬಾಧಿತ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಮೂರು ಹಂತಗಳಲ್ಲಿ ಎರಡು ಡೋಸ್ ವ್ಯಾಕ್ಸಿನೇಷನ್ ನಂತರ ಒಂದು ಬೂಸ್ಟರ್ ನೀಡಿರುವುದು ಪರಿಣಾಮಕಾರಿಯಾಗಿದೆ.

ಇದರ ಜೊತೆಗೆ 2020ರಲ್ಲಿ ಮೊದಲ ಬಾರಿಗೆ ಕಾಡಿನಿಂದ ಮನೆಗಳಿಗೆ ಉಣುಗುಗಳನ್ನು ಹೊತ್ತು ತರುತ್ತಿದ್ದ 8 ಸಾವಿರ ದನಕರುಗಳಿಗೂ ಡೋರಾಮೆಕ್ಷನ್ ಚುಚ್ಚುಮದ್ದು ನೀಡಲಾಗಿದ್ದು, ಇದು ಸಹ ಕೆಎಫ್​​ಡಿ ನಿಯಂತ್ರಣ ಮಾಡುವಲ್ಲಿ ಫಲ ನೀಡಿದೆ.

ಏನಿದು ಮಂಗನ ಕಾಯಿಲೆ?:1956ರಲ್ಲಿ ಮೊಟ್ಟ ಮೊದಲ ಬಾರಿಗೆ ಸೊರಬ ತಾಲೂಕು ಕ್ಯಾಸನೂರಲ್ಲಿ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ವಿಷಮಶೀತ ಜ್ವರ ಹೋಲುವ ಹೊಸ ರೀತಿಯ ಕಾಯಿಲೆ ಜನರಲ್ಲಿ ಕಾಣಿಸಿತು. ಅದರ ಬೆನ್ನಿಗೆ ಅದೇ ಪ್ರದೇಶದಲ್ಲಿ ಮಂಗಗಳು ಸಾಯಲಾರಂಭಿಸಿದವು. ರಾಜ್ಯ ಆರೋಗ್ಯ ಇಲಾಖೆ ಮತ್ತು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಯು ನಡೆಸಿದ ಸಂಶೋಧನೆಯಲ್ಲಿ ವೈರಸ್‍ನಿಂದಾಗಿ ಈ ಕಾಯಿಲೆ ಹರಡುತ್ತಿರುವುದು ಪತ್ತೆಯಾಯಿತು.

ಮೊದಲ ಬಾರಿಗೆ ಕ್ಯಾಸನೂರಲ್ಲಿ ಕಾಣಿಸಿದ್ದರಿಂದ ಅದಕ್ಕೆ ಕ್ಯಾಸನೂರು ಅರಣ್ಯ ಕಾಯಿಲೆ ಎಂದು ಹೆಸರಿಡಲಾಯಿತು. ಮೊದಲ ಬಾರಿಗೆ ಈ ಕಾಯಿಲೆ ಕ್ಯಾಸನೂರಲ್ಲಿ ಕಾಣಿಸಿದರೂ ಆನಂತರದಲ್ಲಿ ಇದರ ಉಪಟಳ ಕೊಡಗಿನಿಂದ ಬೆಳಗಾವಿವರೆಗಿನ ಪಶ್ಚಿಮಘಟ್ಟ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಿಗೂ ಹರಡುತ್ತಾ ಹೋಯಿತು.

ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಮಂಗನ ಕಾಯಿಲೆ ಬಾಧಿತ ತಾಲೂಕು ಅಂದರೆ ತೀರ್ಥಹಳ್ಳಿ. ಈ ತಾಲೂಕಿನಲ್ಲಿ ಕಳೆದ 20 ವರ್ಷಗಳಿಂದ ನಿರಂತರ ಒಂದಲ್ಲಾ ಒಂದು ಊರಿನಲ್ಲಿ ಮಂಗನ ಕಾಯಿಲೆ ಕಾಣಿಸಿ ಆನಂತರದಲ್ಲಿ ಇಡೀ ಪ್ರದೇಶ ವ್ಯಾಪಿಸಿಕೊಳ್ಳುತ್ತಿದೆ.

2012ರಿಂದ ಈಚೆಗೆ ಪ್ರತಿವರ್ಷದ ಮಾಹಿತಿಯನ್ನು ನೋಡಿದಾಗ 2014ರಲ್ಲಿ ತೀರ್ಥಹಳ್ಳಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ 130 ಮಂದಿ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 148 ಮಂದಿಯಲ್ಲಿ ಮಂಗನ ಕಾಯಿಲೆ ಕಾಣಿಸಿತ್ತು. ಚಿಕಿತ್ಸೆ ಫಲಕಾರಿಯಾಗದೆ ಒಬ್ಬರು ಮೃತಪಟ್ಟರೆ ಉಳಿದವರು ಗುಣಮುಖರಾದರು.

2015-16ರಲ್ಲಿ ರಾಜ್ಯದಲ್ಲಿ 23 ಮಂದಿಯಲ್ಲಿ ಕೆಎಫ್‍ಡಿ ಕಾಣಿಸಿಕೊಂಡು ಒಬ್ಬರು ಮೃತಪಟ್ಟರೆ, 2016-17ರಲ್ಲಿ ಮತ್ತೆ 43 ಮಂದಿಯಲ್ಲಿ ಈ ಕಾಯಿಲೆ ಕಾಣಿಸಿ ಇಬ್ಬರು ಮೃತಪಟ್ಟರು. 2017-18ರಲ್ಲಿ 26 ಮಂದಿಯಲ್ಲಿ ಕೆಎಫ್​​ಡಿ ಕಾಣಿಸಿ, ಒಬ್ಬರು ಮೃತರಾಗಿದ್ದರು.

ಮಂಗನ ಕಾಯಿಲೆ ಹರಡುವುದು ಹೇಗೆ? :ಹಿಮೊಫೈಸಾಲಿಸ್ ಸ್ಪಿನಿಂಜರಾ ಎಂಬ ಉಣ್ಣೆಯ ಮರಿಗಳು ಕಾಡಿನಲ್ಲಿ ಕಾಯಿಲೆ ಇರುವ ಸಣ್ಣ ಗಾತ್ರದ ಸಸ್ತನಿಗಳು, ಪಕ್ಷಿಗಳು ಮತ್ತು ಮಂಗಗಳ ರಕ್ತ ಕುಡಿದು ರೋಗ ತಂದುಕೊಳ್ಳುತ್ತವೆ. ಅದೇ ಉಣ್ಣೆಯು ಮನುಷ್ಯರಿಗೆ ಕಚ್ಚುವುದರಿಂದ ವೈರಾಣು ಮನುಷ್ಯರ ದೇಹ ಆವರಿಸಿಕೊಳ್ಳುತ್ತದೆ. ಈ ಕಾರಣದಿಂದ ಕಾಯಿಲೆ ಪೀಡಿತ ಮಂಗಗಳು ಅಥವಾ ಮಂಗಗಳ ಮೃತದೇಹಗಳು ಕಂಡು ಬಂದಲ್ಲಿ ಅರಣ್ಯ ವಾಸಿಗಳು ಹೆದರುತ್ತಾರೆ.

ಮಂಗನ ಕಾಯಿಲೆಯ ರೋಗ ಲಕ್ಷಣವೇನು?:

  • ಸತತ 8-10 ದಿನಗಳವರೆಗೆ ಎಡಬಿಡದೆ ಬರುವ ಜ್ವರ
  • ವಿಪರೀತ ತಲೆನೋವು
  • ಕೈ-ಕಾಲು, ಸೊಂಟ ನೋವು
  • ವಿಪರೀತ ನಿಶ್ಶಕ್ತಿ
  • ಕಣ್ಣುಗಳು ಕೆಂಪಾಗುವುದು
  • ಅತಿಯಾದ ಬಾಯಾರಿಕೆ
  • 4 ರಿಂದ 6 ದಿನಗಳ ಬಳಿಕ ಮೂಗು, ಬಾಯಿ, ಗುದದ್ವಾರದಿಂದ ರಕ್ತ ಸ್ರಾವ
  • ಕೈ-ಕಾಲು ಸ್ವಾಧೀನ ತಪ್ಪಬಹುದು
  • ಕೆಲವರು ಎಚ್ಚರ ತಪ್ಪುವ ಸ್ಥಿತಿಗೂ ಹೋಗಬಹುದು

ಶಿವಮೊಗ್ಗದಲ್ಲೇ ತಯಾರಾಗುತ್ತಿದ್ದ ಮಂಗನ ಕಾಯಿಲೆ ವ್ಯಾಕ್ಸಿನ್ :ರಾಜ್ಯದಲ್ಲಿ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿದ ಮಂಗನ ಕಾಯಿಲೆಗೆ ಶಿವಮೊಗ್ಗದಲ್ಲಿಯೇ ಕೆಎಫ್‍ಡಿ ಲಸಿಕೆ ಉತ್ಪಾದಿಸಲಾಗುತ್ತಿತ್ತು. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಸಿಮ್ಸ್) ಮಹಾವಿದ್ಯಾಲಯದ ಮುಂಭಾಗದಲ್ಲಿ ಕೆಎಫ್‍ಡಿ ಉತ್ಪಾದನಾ ಘಟಕವಿತ್ತು. ಶಿವಮೊಗ್ಗದಲ್ಲಿ ಉತ್ಪಾದನೆಯಾದ ಕೆಎಫ್‍ಡಿ ಲಸಿಕೆಯು ರಾಜ್ಯದೆಲ್ಲೆಡೆಗೆ ಪೂರೈಕೆಯಾಗುತ್ತಿತ್ತು.

ಅಂತಹ ಲಸಿಕಾ ಉತ್ಪಾದನಾ ಕೇಂದ್ರವನ್ನು 2001ರಲ್ಲಿ ಸಂಪೂರ್ಣವಾಗಿ ಮುಚ್ಚಿ ಲಸಿಕೆ ಉತ್ಪಾದನೆ ಜವಾಬ್ದಾರಿಯನ್ನು ಬೆಂಗಳೂರು ಹೆಬ್ಬಾಳದ ಇನ್‍ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್​​ಗೆ ವಹಿಸಲಾಯಿತು.

1956ರಲ್ಲಿ ಮೊದಲ ಬಾರಿಗೆ ಸೊರಬ ತಾಲೂಕು ಕ್ಯಾಸನೂರಲ್ಲಿ ಕಾಣಿಸಿದ ಮಂಗನ ಕಾಯಿಲೆಯು ಅತೀ ವೇಗವಾಗಿ ರಾಜ್ಯದೆಲ್ಲೆಡೆ ಅರಣ್ಯ ಪ್ರದೇಶಗಳಿಗೆ ವ್ಯಾಪಿಸಿದ್ದರಿಂದ ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ಆರೋಗ್ಯ ಇಲಾಖೆಯು ಲಸಿಕೆಯನ್ನು ಅಭಿವೃದ್ಧಿಪಡಿಸಿ ಕೋಟ್ಯಂತರ ರೂ. ವೆಚ್ಚದಲ್ಲಿ 1984ರಲ್ಲಿ ಲಸಿಕಾ ಉತ್ಪದನಾ ಕೇಂದ್ರ ತೆರೆದಿತ್ತು.

ಆದರೆ, ಹಳೇ ಕಟ್ಟಡದಲ್ಲಿ ತೆರೆಯಲಾದ ಲಸಿಕಾ ಉತ್ಪಾದನಾ ಕೇಂದ್ರವನ್ನು ಸಮರ್ಥವಾಗಿ ನಿರ್ವಹಣೆ ಮಾಡುವಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿರ್ಲಕ್ಷ್ಯವಹಿಸಿತು. ಇದರ ಪರಿಣಾಮವಾಗಿ ಕಟ್ಟಡದ ನಿರ್ವಹಣೆ ನನೆಗುದಿಗೆ ಬಿದ್ದು ಸೋರಲಾರಂಭಿಸಿತು. ಲಸಿಕಾ ಉತ್ಪಾದನಾ ಕೇಂದ್ರದ ಹವಾಮಾನವನ್ನು ನಿಯಂತ್ರಣದಲ್ಲಿಡಲಾಗದೆ ನೂರಾರು ಲಸಿಕೆಗಳಿಗೆ ಸೋಂಕು ತಗುಲಿ ವ್ಯರ್ಥವಾಗುತ್ತಿದ್ದವು.

ಲಸಿಕಾ ಕೇಂದ್ರ ಕಟ್ಟಡವನ್ನು ದುರಸ್ತಿ ಮಾಡಿ ಈ ಕೇಂದ್ರವನ್ನು ಆಧುನೀಕರಿಸುವ ಬದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಲಸಿಕಾ ಕೇಂದ್ರವನ್ನೇ ಮುಚ್ಚಲು ಆದೇಶ ನೀಡಿತು. ಲಸಿಕಾ ಕೇಂದ್ರದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಬದಲು ರದ್ದುಗೊಳಿಸಲಾಯಿತು.

ಪ್ರತಿ ವರ್ಷ ಮಲೆನಾಡು ಜನರ ನಿದ್ದೆಗೆಡಿಸುತ್ತಿದ್ದ ಮಹಾಮಾರಿ ಮಂಗನ ಕಾಯಿಲೆ ಗಣನೀಯವಾಗಿ ತಗ್ಗಿರುವುದು ಮಲೆನಾಡು ಜನರಲ್ಲಿ ಸಂತಸ ತರಿಸಿದೆ. ಆರೋಗ್ಯ ಇಲಾಖೆ ಇದೇ ರೀತಿ ಮುಂಜಾಗ್ರತಾ ಕ್ರಮಕೈಗೊಂಡ್ರೇ ಮಲೆನಾಡು ಮಂಗನ ಕಾಯಿಲೆಯಿಂದ ಮುಕ್ತವಾಗಲಿದೆ.

ABOUT THE AUTHOR

...view details