ಶಿವಮೊಗ್ಗ: ಅರಳಗೋಡು ಗ್ರಾಮದಲ್ಲಿ ಮತ್ತೆ ಮಂಗನಕಾಯಿಲೆ ಕಾಣಿಸಿದೆ. ಮಂಗನಕಾಯಿಲೆಯಿಂದ ಅರಳಗೋಡು ಗ್ರಾಪಂ ಸದಸ್ಯ ರಾಮಸ್ವಾಮಿ ಕರುಮನೆ(55) ಸಾವನ್ನಪ್ಪಿದ್ದಾರೆ. ರಾಮಸ್ವಾಮಿ ಅವರಿಗೆ ಏಪ್ರಿಲ್ 24ರಂದು ಜ್ವರ ಕಾಣಿಸಿತ್ತು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಸಾಗರ ಆಸ್ಪತ್ರೆಯಲ್ಲಿ ಜ್ವರ ಗುಣಮುಖವಾಗದ ಕಾರಣ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ಏಪ್ರಿಲ್ 26ರಂದು ದಾಖಲಾಗಿದ್ದರು. ಅಲ್ಲಿ ರಾಮಸ್ವಾಮಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಣಿಪಾಲದಲ್ಲಿ ಸ್ವಲ್ಪ ಕೊಂಚ ಚೇತರಿಕೆ ಕಂಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.