ಶಿವಮೊಗ್ಗ:ಕೊರೊನಾ ಮೆಡಿಕಲ್ ಪರೀಕ್ಷಾ ಕಿಟ್ ಟೆಂಡರ್ನಲ್ಲಿ ಸಹ ಅವ್ಯವಹಾರ ಮಾಡಿರುವುದು ಖಂಡನೀಯ. ಚೀನಾದಿಂದ ಆಮದು ಮಾಡಿಕೊಂಡ ಕಿಟ್ಗಳು ಕಳಪೆ ಗುಣಪಟ್ಟದಿಂದ ಕೂಡಿವೆ. ಪ್ರಧಾನಿ ಅವರು ಈ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಪ್ರಧಾನಿ ಮೋದಿ ಕೇವಲ ಲಾಕ್ಡೌನ್ ಹೇಳಲು ಮಾತ್ರ ಹೊರಗೆ ಬರುತ್ತಿದ್ದಾರೆ. ಆಮದು ಮಾಡಿಕೊಂಡ ಕಿಟ್ಗಳ ಗುಣಮಟ್ಟದ ಬಗ್ಗೆ ಮಾತನಾಡುತ್ತಿಲ್ಲ. ಇನ್ನು ಕೇವಲ ಅಕ್ಕಿ, ಗೋಧಿ ನೀಡಲಾಗುತ್ತಿದೆ. ಇದರ ಜೊತೆಗೆ ಅವಶ್ಯಕ ದಿನಸಿ ವಸ್ತುಗಳಿಗೆ ಕಾರ್ಮಿಕ ವರ್ಗ ಯಾರನ್ನು ಕೇಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕೊರೊನಾ ತಡೆಗೆ ಮೂರು ವಿಭಾಗಗಳನ್ನು ಮಾಡಲಾಗಿದೆ. ಆದರೆ, ಮುಖ್ಯವಾಗಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಅಗತ್ಯ ವಸ್ತುಗಳು ಜನರಿಗೆ ತಲುಪಿಸುವುದು ಕಷ್ಟವಾಗಿದೆ. ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಂಘಟಿತ ವಲಯದ ಕಾರ್ಮಿಕರ ಬ್ಯಾಂಕ್ ಖಾತೆಗೆ ಕೂಡಲೇ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ: ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಈ ಮೊದಲು ಬೇರೆ ರಾಜ್ಯಕ್ಕೆ ಮೆಕ್ಕೆಜೋಳ ರಫ್ತು ಮಾಡುವುದರಿಂದ ಉತ್ತಮ ಬೆಲೆ ದೊರೆಯುತ್ತಿತ್ತು. ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.