ಶಿವಮೊಗ್ಗ: ಬಸವನಗೌಡ ಪಾಟೀಲ್ ಯತ್ನಾಳ್ ಆತ್ಮರತಿ ಎಂಬ ಮಾನಸಿಕ ಕಾಯಿಲೆಗೆ ಒಳಗಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಯತ್ನಾಳ್ 'ಆತ್ಮರತಿ' ಎಂಬ ಮಾನಸಿಕ ಕಾಯಿಲೆಗೊಳಗಾಗಿದ್ದಾರೆ; ಆಯನೂರು ಮಂಜುನಾಥ್ - ಬಸವನಗೌಡ ಪಾಟೀಲ್ ಯತ್ನಾಳ್ ಕುರಿತು ಆಯನೂರು ಮಂಜುನಾಥ್ ಲೇವಡಿ
ಬಸವನಗೌಡ ಪಾಟೀಲ್ ಯತ್ನಾಳ್ ಕೆಲವು ಹೇಳಿಕೆಗಳನ್ನು ನೀಡುವ ಮೂಲಕ ತನ್ನನ್ನು ತಾನು ಸಮರ್ಥ ಎಂದು ಅಂದುಕೊಂಡಿದ್ದಾರೆ. ಪಕ್ಷ ಮುಂದಿನ ದಿನಗಳಲ್ಲಿ ಅವರ ಮೇಲೆ ಸೂಕ್ತ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.
ಶಿವಮೊಗ್ಗದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವನಗೌಡ ಪಾಟೀಲ್ ಯತ್ನಾಳ್ 'ಆತ್ಮರತಿ' ಎಂಬ ಮಾನಸಿಕ ಕಾಯಿಲೆಗೆ ಒಳಗಾಗಿದ್ದಾರೆ. ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದರು. ರಾಜಕೀಯವಾಗಿ ಕಳೆದು ಹೋಗುತ್ತಿದ್ದೇನೆ ಎಂದು ಯಾವಾಗ ಅನಿಸುತ್ತದೆಯೋ ಅಂತ ಸಮಯದಲ್ಲಿ ಇಂತಹ ಕೆಲವು ಹೇಳಿಕೆಗಳನ್ನು ನೀಡುವ ಮೂಲಕ ತನ್ನನ್ನು ತಾನು ಸಮರ್ಥ ಎಂದು ಅಂದುಕೊಂಡಿದ್ದಾರೆ. ಪಕ್ಷ ಮುಂದಿನ ದಿನಗಳಲ್ಲಿ ಇವರ ಮೇಲೆ ಸೂಕ್ತ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ವಿಜಯೇಂದ್ರ ಅವರ ಪ್ರಭಾವ ಬಿಜೆಪಿಯಲ್ಲಿ ಹೆಚ್ಚಾಗುತ್ತಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಎಂಎಲ್ಸಿ ಮಂಜುನಾಥ್, ವಿಜಯೇಂದ್ರ ಎರಡು ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಯಾವ ಸಂಘಟನೆಗಳು ಜೀವಂತಿಕೆಯನ್ನು ತೋರಿಸುತ್ತದೆಯೋ ಅಂತ ಸಂಘಟನೆಯಲ್ಲಿ ಇಂತಹ ಹೊಸ ನಾಯಕರುಗಳು ಬರುತ್ತಾರೆ ಎಂದರು. ಕಾಂಗ್ರೆಸ್ ಜೀವಂತಿಕೆ ಕಳೆದುಕೊಂಡ ಪಕ್ಷ. ಹಾಗಾಗಿ ಅಲ್ಲಿ ಹೊಸ ನಾಯಕರಿಗೆ ಅವಕಾಶ ಇಲ್ಲ ಎಂದರು. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ತಮ್ಮ ಜವಾಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಮಸ್ಕಿ ಹಾಗೂ ಬಸವಕಲ್ಯಾಣದಲ್ಲೂ ವಿಜಯಶಾಲಿಗಳಾಗಿ ಬರಲಿ ಎಂದು ಹಾರೈಸಿದರು.
ಸಂಪುಟ ರಚನೆ ಕುರಿತು ಮಾತನಾಡಿದ ಅವರು ಸರ್ಕಾರ ರಚನೆಗೆ ಕಾರಣರಾದವರನ್ನು ಮಂತ್ರಿ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ, ಅದರಂತೆ ನಡೆದುಕೊಳ್ಳುತ್ತಾರೆ ಹಾಗಾಗಿ ಸಂಪುಟ ರಚನೆ ಅನಿವಾರ್ಯವಾಗಿದೆ ಎಂದರು.