ಶಿವಮೊಗ್ಗ: ನಾವೂ ಹಿಂದೂಗಳೇ. ನಾವೂ ಶ್ರೀರಾಮ ಭಕ್ತರೇ. ನನ್ನ ಎದೆ ಸೀಳಿದರೆ ಶ್ರೀರಾಮ ಹಾಗೂ ಸಿದ್ದರಾಮ ಇಬ್ಬರೂ ಇದ್ದಾರೆ ಎನ್ನುವ ಮೂಲಕ ತಾವು ರಾಮಮಂದಿರದ ವಿರೋಧಿಗಳಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ, ನಮ್ಮಲ್ಲಿ ರಾಮಮಂದಿರ ವಿಷಯದಲ್ಲಿ ಗೊಂದಲ ಇಲ್ಲ. ನಾವು ಹಿಂದುಗಳೇ, ನಾವು ಶ್ರೀರಾಮನ ಆರಾಧಕರು. ನನ್ನೆದೆ ಸೀಳಿದರೆ ಶ್ರೀರಾಮ, ಸಿದ್ದರಾಮ ಎಲ್ಲರೂ ಇದ್ದಾರೆ. ಆದರೆ ಬಿಜೆಪಿಯವರು ನಮ್ಮನ್ನು ಹಿಂದೂ ವಿರೋಧಿಗಳು ಎಂಬ ರೀತಿ ಬಿಂಬಿಸುತ್ತಿದ್ದಾರೆ. ಯುವಕರು ರಾಜಕಾರಣಿಗಳ ಹಿಂದೆ ದಯವಿಟ್ಟು ಬರಬೇಡಿ. ನಿಮಗೆ ರಾಜಕಾರಣಿ ಇಷ್ಟ ಆದ್ನಾ, ಚುನಾವಣೆ ಸಮಯದಲ್ಲಿ ಮತ ಹಾಕಿ ಎಂದರು. ಆದರೆ, ಯುವಕರು ಯಾವುದೇ ಕಾರಣಕ್ಕೂ ಕೋಮು ಗಲಭೆಗೆ ಒಳಗಾಗಬೇಡಿ. ದಯವಿಟ್ಟು ಜೀವನ ಕಟ್ಟಿಕೊಳ್ಳಿ, ಸಂಪಾದನೆ ಮಾಡಿ ಎಂದು ಸಲಹೆ ನೀಡಿದರು.
ರಾಮ ಮಂದಿರ ತೆರೆಸಿದ್ದೇ ರಾಜೀವ್ ಗಾಂಧಿ:ರಾಮಮಂದಿರ ವಿಚಾರವನ್ನು ಪುನಃ ತೆರೆಸಿದ್ದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜ.22ರ ನಂತರ ಹೋಗುತ್ತೇವೆ ಅಂದಿದ್ದಾರೆ. ನಾವೂ ಹೋಗುತ್ತೇವೆ. ನಾನೂ ಶ್ರೀರಾಮನ ಆರಾಧಕ. ನನಗೂ ದೈವ ಭಕ್ತಿ ಇದೆ. ದೈವ ಭಕ್ತಿ ಇರೋದಕ್ಕೆ ನಾವು ಅಧಿಕಾರಕ್ಕೆ ಬಂದಿರೋದು ಎಂದರು.
ಹೆಗಡೆ ಬಹಿರಂಗ ಚರ್ಚೆಗೆ ಬರಲಿ: ಸಂಸದ ಅನಂತ್ ಕುಮಾರ್ ಹೆಗಡೆ ಬಹಿರಂಗ ಚರ್ಚೆಗೆ ಬರಲಿ, ಸಂಸ್ಕೃತಿ ಬಗ್ಗೆ ಮಾತನಾಡೋಣ ಎಂದು ಸವಾಲು ಹಾಕಿದರು. ಹೆಗಡೆ, ಪ್ರತಾಪ್ ಸಿಂಹರ ಬಗ್ಗೆ ನಾನು ಗೌರವ ಕೊಟ್ಟು ಮಾತನಾಡುತ್ತೇನೆ. ನಮ್ಮ ಮನೆಯಲ್ಲಿ ನಮಗೆ ಸಂಸ್ಕೃತಿ ಕಲಿಸಿದ್ದಾರೆ ಎಂದು ಟಾಂಗ್ ಕೊಟ್ಟರು.