ಶಿವಮೊಗ್ಗ:ಜಿಲ್ಲೆಯ ಸೊರಬ ಪಟ್ಟಣ ಪಂಚಾyತ್ ವ್ಯಾಪ್ತಿಯ ಕುಣಜಿಬೈಲು ಗ್ರಾಮದ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆ ಕಾಮಗಾರಿ: ಶಾಸಕ ಕುಮಾರ್ ಬಂಗಾರಪ್ಪ
ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಪಂ, ಅರಣ್ಯ ಇಲಾಖೆ, ಕಂದಾಯ ಅಧಿಕಾರಿಗಳು ಚರ್ಚಿಸಿ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಸೂಚಿಸಿದ್ದಾರೆ.
ಸೊರಬ ಪಟ್ಟಣಕ್ಕೆ ಹೊಂದಿಕೊಂಡಿರುವ ಕುಣಜಿಬೈಲು ಗ್ರಾಮದ ರಸ್ತೆ ನಿರ್ಮಾಣ ಕುರಿತು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ರಸ್ತೆ ಸಂಪರ್ಕವಿಲ್ಲದೆ ಇಲ್ಲಿನ ಜನತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. 6ನೇ ವಾರ್ಡ್‌ಗೆ ಒಳಪಡುವ ಪ್ರದೇಶದಲ್ಲಿ ಕ್ಲಿಷ್ಟಕರ ರಸ್ತೆಯಲ್ಲಿ ಜನತೆ ಸಂಚರಿಸುವುದು ಕಷ್ಟಕರವಾಗಿತ್ತು. ಈ ನಿಟ್ಟಿನಲ್ಲಿ ಮಳೆಹಾನಿ ದುರಸ್ತಿ ಅನುದಾನದ ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಕೊಡಕಣಿ, ಹೆಗ್ಗೋಡು ಗ್ರಾಮದಿಂದ ಕುಣಜಿಬೈಲು ಮಾರ್ಗವಾಗಿ ಸೊರಬ-ಉಳವಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವುದರಿಂದ ಸರ್ಕಾರಿ ಆಸ್ಪತ್ರೆ, ಕೋರ್ಟ್, ಸಂತೆ ಮೈದಾನ ಸೇರಿದಂತೆ ವಿವಿಧ ಇಲಾಖೆಗಳಿಗೆ ದಿನನಿತ್ಯ ಕೆಲಸ ಕಾರ್ಯಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಜೊತೆಯಲ್ಲಿ ಕುಣಜಿಬೈಲು ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿದಂತಾಗುತ್ತದೆ ಎಂದರು.