ಶಿವಮೊಗ್ಗ: ರಾಜ್ಯ ಸರ್ಕಾರವು ಸಚಿವ ಡಿ ಸುಧಾಕರ್ ಅವರ ರಾಜೀನಾಮೆ ಪಡೆದು ಕಾನೂನು ಕ್ರಮವನ್ನು ಜರುಗಿಸಬೇಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಆಗ್ರಹಿಸಿದ್ದಾರೆ. ಶಿಕಾರಿಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧಾಕರ್ ಅವರು ಜವಾಬ್ದಾರಿಯುತ ಮಂತ್ರಿಯಾಗಿದ್ದಾರೆ. ನನಗೆ ಸುಧಾಕರ್ ಸೇರಿದಂತೆ ಯಾವುದೇ ಮಂತ್ರಿಗಳ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಗೌರವಾನ್ವಿತ ಸ್ಥಾನದಲ್ಲಿರುವ ಸುಧಾಕರ್ ದಲಿತ ಸಮಾಜದ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದಾರೆ. ಸುಧಾಕರ್ ಅವರ ಮಾತುಗಳು ಅವರಿಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದರು.
ಸಚಿವ ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ಡಿಸಿಎಂ ಡಿ.ಕೆ ಶಿವಕುಮಾರ್ ಸಮರ್ಥನೆ ಮಾಡಿ, ಕ್ಲೀನ್ ಚಿಟ್ ಕೊಡುತ್ತಿರುವುದು ಎಷ್ಟು ಸರಿ. ಕಾಂಗ್ರೆಸ್ನವರು ದಲಿತರ ಬಗ್ಗೆ ಒಂದು ಕಡೆ ಮೊಸಳೆ ಕಣ್ಣೀರು ಹಾಕುತ್ತಾರೆ. ದಲಿತರ ಮತ ಪಡೆಯಲು ಎಲ್ಲಾ ನಾಟಕ ಮಾಡುತ್ತಾರೆ. ಈಗ ಡಿ.ಸುಧಾಕರ್ ಅವರಿಂದ ಕಾಂಗ್ರೆಸ್ನವರ ನಿಜಬಣ್ಣ ದಲಿತರು ಸೇರಿದಂತೆ ರಾಜ್ಯದ ಜನರಿಗೆ ಗೊತ್ತಾಗಿದೆ. ಎಫ್ಐಆರ್ ದಾಖಲಾದರೂ ಡಿಸಿಎಂ ಸಚಿವರ ಪರ ಮಾತನಾಡಿರುವುದು ದಲಿತರಿಗೆ ಮಾಡೋ ಅಪಮಾನ ಎಂದು ಕಿಡಿಕಾರಿದರು.
ಚೈತ್ರಾ ಕುಂದಾಪುರ ಬಂಧನ ವಿಚಾರವಾಗಿ ಮಾತನಾಡಿ, ಚೈತ್ರಾ ಕುಂದಾಪುರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಿ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ಶಾಸಕ ವಿಜಯೇಂದ್ರ ಸ್ಪಷ್ಟಪಡಿಸಿದರು.
ಕಾವೇರಿ ನೀರು ವಿಚಾರವಾಗಿ ವಾಗ್ದಾಳಿ ನಡೆಸಿದ ವಿಜಯೇಂದ್ರ, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ. ಸರ್ಕಾರದಿಂದ ಮಾಡಬೇಕಾದ ಕೆಲಸವನ್ನು ರೈತ ಸಂಘ ಮಾಡುತ್ತಿದೆ. ಇಂದು ರೈತಸಂಘ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಸರ್ಕಾರದ ಬಗ್ಗೆ ರೈತರು ವಿಶ್ವಾಸ ಕಳೆದುಕೊಂಡಿದ್ದಾರೆ. ಕಾವೇರಿ ವಿಚಾರದಲ್ಲೂ ರೈತರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬರದ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಇದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದಲೇ ರೈತರ ಆತ್ಮವಿಶ್ವಾಸ ಕುಸಿಯುತ್ತಿದೆ. ಕಂದಾಯ ಸಚಿವರು ವಾರದಲ್ಲೇ ಬರ ಘೋಷಣೆ ಮಾಡುತ್ತೇವೆ ಎನ್ನುತ್ತಿದ್ದರು. ಆದರೆ, ಈವರೆಗೆ ಬರ ಘೋಷಣೆ ಮಾಡಿಲ್ಲ ಎಂದರು.