ಶಿವಮೊಗ್ಗ:ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 'ಹನಿಮೂನ್ ಪಿರಿಯಡ್'ನಿಂದ ಇನ್ನೂ ಹೊರ ಬಂದಿಲ್ಲ ಎಂದು ಬಿಜೆಪಿ ಶಾಸಕ ಬಿ. ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಶಿಕಾರಿಪುರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಪೂರ್ಣವಾಗುತ್ತಿದೆ. ಅಧಿವೇಶನದಲ್ಲಿ ಕೇವಲ ಗ್ಯಾರಂಟಿ ಕಾರ್ಡ್ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಿರ್ಮಾಣವಾಗಿರುವ ಬರಗಾಲದ ಬಗ್ಗೆ ಶೂನ್ಯ ವೇಳೆಯಲ್ಲಿ ಚರ್ಚೆ ಮಾಡಿದ್ದೇನೆ. 21 ಜಿಲ್ಲೆಗಳಲ್ಲಿ ಬರಗಾಲದ ವಾತಾವರಣ ಇದೆ. ಇದರಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಮಲೆನಾಡಿನಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ರಾಜ್ಯದ ಯಾವ ಡ್ಯಾಂನಲ್ಲಿಯೂ ನೀರಿಲ್ಲ. ಕಲಬುರಗಿ ಭಾಗದಲ್ಲಿ ತೊಗರಿ, ಹೆಸರು ಬೆಳೆದ ರೈತರು ಕಂಗಾಲಾಗಿದ್ದಾರೆ. ಒಂದು ಕಡೆ ಬೆಲೆ ಏರಿಕೆ, ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ರಾಜ್ಯದ ಜನರು ಚರ್ಚೆ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಇದ್ಯಾವುದೂ ಚರ್ಚೆ ಆಗುತ್ತಿಲ್ಲ. ಕೆಲಸಕ್ಕೆ ಬಾರದ ವಿಷಯಗಳು ಚರ್ಚೆ ಆಗುತ್ತಿವೆ ಎಂದು ದೂರಿದರು.
ದ್ವೇಷದ ರಾಜಕಾರಣ: ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಬಗ್ಗೆ ಸದನದಲ್ಲಿ ಮಾತನಾಡುತ್ತೇನೆ. ರಾಜ್ಯ ಸರ್ಕಾರದಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ. ಹಿಂದಿನ ಸರ್ಕಾರದಲ್ಲಿ ಹಗರಣಗಳು ನಡೆದಿದೆ ಎಂಬುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದರು. ಮುಗಿದ ನಂತರವೂ ಅದೇ ದಾಟಿಯಲ್ಲಿ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷ ಇದರ ಬಗ್ಗೆ ಹೆದರಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಭೂಮಿ ಹಿಂಪಡೆಯುವ ನಿರ್ಧಾರ ದುರಂತ:ರಾಷ್ಟ್ರೋತ್ಥಾನ ಪರಿಷತ್ ಅಡಿ ಜನಸೇವಾ ವಿದ್ಯಾ ಕೇಂದ್ರ ಕಳೆದ 30-40 ವರ್ಷಗಳಿಂದ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿದೆ. ಸಾವಿರಾರು ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದೆ. ಶಿಕ್ಷಣದಲ್ಲಿ ವ್ಯಾಪಾರೀಕರಣದ ಚರ್ಚೆಯಾಗುತ್ತಿದೆ. ಆದರೆ ನಮ್ಮ ಜನ ಸೇವಾ ವಿದ್ಯಾ ಕೇಂದ್ರದಲ್ಲಿ ಸಾವಿರಾರು ಬಡ ಮಕ್ಕಳು ಶಿಕ್ಷಣ ಪಡೆದಿದ್ದಾರೆ. ಅವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಹೊಸ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ 35 ಎಕರೆ ಭೂಮಿ ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿರುವುದು ದುರಂತ. ಶಿಕ್ಷಣದ ಕ್ಷೇತ್ರದ ಮೇಲೂ ಈ ಸರ್ಕಾರ ವಕ್ರ ದೃಷ್ಟಿ ಬೀರಿದೆ. ಇದು ಸಚಿವರಿಗೆ, ಸಿಎಂ ಅವರಿಗೆ ಶೋಭೆ ತರ ತಕ್ಕಂಥದ್ದಲ್ಲ. ವಿನಾಕಾರಣ ರಾಜಕಾರಣ ಮಾಡಬಾರದು. ಗುಣಮಟ್ಟದ ಶಿಕ್ಷಣವನ್ನು ಕೊಡುವಂತಹ ಶಿಕ್ಷಣ ಕೇಂದ್ರಕ್ಕೆ ಕೊಟ್ಟ ಭೂಮಿಯನ್ನು ಹಿಂಪಡೆಯಬಾರದು. ಯಾರ್ಯಾರಿಗೆ ಭೂಮಿ ಕೊಟ್ಟಿದ್ದಾರೆ ಎಂಬ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಿ ಎಂದರು.