ಶಿವಮೊಗ್ಗ:ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಆಕೆ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚೈತ್ರಾ ಕುಂದಾಪುರ ಅವರ ಪ್ರಕರಣವನ್ನು ನಾನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಸಿಸಿಬಿ ತನಿಖೆ ನಡೆಯುತ್ತಿದೆ, ತನಿಖೆ ನಂತರ ಎಲ್ಲವೂ ಹೊರಬರುತ್ತದೆ ಎಂದು ಹೇಳಿದರು.
ಬಿಜೆಪಿಯಲ್ಲಿ ದುಡ್ಡು ಕೊಟ್ಟು ಟಿಕೆಟ್ ಪಡೆಯುವ ಸಂಸ್ಕೃತಿ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಅವರ್ಯಾರೋ ನಾಟಕ ಆಡಿದ್ದಾರೆ, ವಂಚನೆ ಮತ್ತು ಹಣ ಮಾಡೋರೋ ಈ ರೀತಿ ಮಾಡಿದ್ದಾರೆ ಎಂದರೆ ಅದಕ್ಕೂ ಬಿಜೆಪಿಗೂ ಏನು ಸಂಬಂಧ ಇಲ್ಲ. ಯಾರೋ ದುಡ್ಡು ಕೊಟ್ಟ ತಕ್ಷಣ ಟಿಕೆಟ್ ನೀಡಲು ಬಿಜೆಪಿ ಟಿಕೆಟ್ ಅಷ್ಟೊಂದು ಅಗ್ಗ ಅಲ್ಲ. ಈ ರೀತಿ ಮಾಡಿರಬಹುದು, ಪ್ರಕರಣದ ಸತ್ಯಾಸತ್ಯತೆ ಸಿಸಿಬಿ ತನಿಖೆಯಿಂದ ಹೊರಬರುತ್ತದೆ. ಚೈತ್ರಾ ಕುಂದಾಪುರಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಆರೋಪಿಗಳು ಹೇಳುವುದೆಲ್ಲ ಸತ್ಯ ಅಂತ ತಿಳಿದುಕೊಳ್ಳುವುದು ತಪ್ಪು ಎಂದರು.
ತೀರ್ಥಹಳ್ಳಿ ಮೂಲದ ಯುವಕ ಅರಾಫತ್ ಬಂಧನದ ಬಗ್ಗೆ ಮಾತನಾಡಿ, ತೀರ್ಥಹಳ್ಳಿ ಎಂದ ಕೂಡಲೇ ಮಹಾನ್ ವ್ಯಕ್ತಿಗಳ ಹೆಸರು ನಮ್ಮ ಕಣ್ಣ ಮುಂದೆ ಬರುತ್ತೆ. ಗೋಪಾಲಗೌಡ, ಕುವೆಂಪು, ಅನಂತಮೂರ್ತಿ, ಕಡಿದಾಳ ಮಂಜಪ್ಪ ಇವರನ್ನು ನೋಡಿ ನಾವು ಹೆಮ್ಮೆ ಪಡುತ್ತಿದ್ದೆವು. ಈಗ ಕೆಲ ದಿನಗಳಿಂದ ಮೀಡಿಯಾದಲ್ಲಿ ಬರುತ್ತಿರುವುದನ್ನ ನೋಡಿದಾಗ ತೀರ್ಥಹಳ್ಳಿಯಲ್ಲಿ ಇರುವಂತಹ ನಮಗೆ ಅತ್ಯಂತ ಆತಂಕ ಉಂಟಾಗಿದೆ ಎಂದರು.