ಕರ್ನಾಟಕ

karnataka

ETV Bharat / state

ಶಿವಮೊಗ್ಗ: ದಾರಿತಪ್ಪಿ ಎರಡು ರಾತ್ರಿ, ಹಗಲು ಕಾಡಿನಲ್ಲಿ‌ ವಾಸ: ಸುರಕ್ಷಿತವಾಗಿ ಮನೆ ಸೇರಿದ 85 ವರ್ಷದ ವೃದ್ಧೆ - etv bharat karnataka

ದಾರಿತಪ್ಪಿ ಕಾಡಿಗೆ ತೆರಳಿ ನಾಪತ್ತೆಯಾಗಿದ್ದ 85 ವರ್ಷದ ವೃದ್ಧೆ ಸುರಕ್ಷಿತವಾಗಿ ಪತ್ತೆಯಾಗಿರುವ ಘಟನೆ ಹೊಸನಗರದಲ್ಲಿ ನಡೆದಿದೆ.

Etv Bharatmissing-old-woman-found-alive-in-hosanagar
ದಾರಿತಪ್ಪಿ ಎರಡು ರಾತ್ರಿ, ಹಗಲು ಕಾಡಿನಲ್ಲಿ‌ ವಾಸ: ಸುರಕ್ಷಿತವಾಗಿ ಕುಟುಂಬ ಸೇರಿದ 85 ವರ್ಷದ ವೃದ್ಧೆ

By ETV Bharat Karnataka Team

Published : Nov 8, 2023, 4:31 PM IST

Updated : Nov 9, 2023, 12:09 PM IST

ನಾಪತ್ತೆಯಾಗಿದ್ದ 85 ವರ್ಷದ ವೃದ್ಧೆ ಸುರಕ್ಷಿತವಾಗಿ ಪತ್ತೆ

ಶಿವಮೊಗ್ಗ: ಮೂರು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧೆ ಸುರಕ್ಷಿತವಾಗಿ ಪತ್ತೆಯಾಗಿರುವ ಘಟನೆ ಹೊಸನಗರ ತಾಲೂಕಿನ ಸಾದಗಲ್ಲು ಗ್ರಾಮದಲ್ಲಿ ನಡೆದಿದೆ.

ಶಾರದಮ್ಮ (85) ಎಂಬ ವೃದ್ಧೆಯು ಹೊಸನಗರ ತಾಲೂಕಿನ ಸಾದಗಲ್ಲು ಗ್ರಾಮದ ನಿವಾಸಿ. ಇವರು ಕಳೆದ ಭಾನುವಾರ ಮನೆ ಹಿಂಭಾಗದ ತೋಟಕ್ಕೆಂದು ಹೋಗಿ ನಾಪತ್ತೆಯಾಗಿದ್ದರು. ಭಾನುವಾರ ರಾತ್ರಿಯಾದರೂ ಮನೆಗೆ ಶಾರದಮ್ಮ ಬಾರದ ಕಾರಣ ಮನೆಯವರು ಹುಡುಕಾಟ ಪ್ರಾರಂಭಿಸಿದ್ದರು. ಆದರೆ ಎಲ್ಲೂ ಪತ್ತೆ ಆಗಿರಲಿಲ್ಲ. ನಂತರ ಕುಟುಂಬಸ್ಥರು ಬೆಳಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸೋಮವಾರ ಸಾದಗಲ್ಲು, ಚಿಕ್ಕಟ್ಟಬ್ಬಿ ಸುತ್ತಮುತ್ತಲ ಕೆರೆ, ಬಾವಿ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಸೋಮವಾರ ಶಾರದಮ್ಮ ಪತ್ತೆಯಾಗಲಿಲ್ಲ. ಪುನಃ ಮಂಗಳವಾರ ಪೊಲೀಸರು ಶ್ವಾನದಳದೊಂದಿಗೆ, ಅರಣ್ಯ ಇಲಾಖೆ, ವೃದ್ಧೆಯ ಸಂಬಂಧಿಕರು, ಗ್ರಾಮಸ್ಥರು ಸೇರಿ ಹುಡುಕಾಟ ಪ್ರಾರಂಭಿಸಿದ್ದರು. ಆದರೂ ಸಹ ಶಾರದಮ್ಮರ ಗುರುತು ಪತ್ತೆಯಾಗಿರಲಿಲ್ಲ.

ಕಾಡಿನಲ್ಲಿ ಇರುವ ಪ್ರಾಣಿಗಳಿಗೆ ಶಾರದಮ್ಮ ಬಲಿಯಾಗಿರಬಹುದೆಂದು ಕುಟುಂಬಸ್ಥರು ಭಾವಿಸಿದ್ದರು. ಕೊನೆಯದಾಗಿ ಹುಡುಕಾಟ ನಡೆಸಲು ತೀರ್ಮಾನಿಸಿ ಕುಟುಂಬಸ್ಥರು ಮನೆಗೆ ವಾಪಸಾದಾಗ, ಶಾರದಮ್ಮ ಪುತ್ರನಿಗೆ ಅವರು ಬದುಕಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಸುದ್ದಿ ಕೇಳಿದ ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಶಾರದಮ್ಮ ದಂಪತಿ ಜೊತೆ ಕುಟುಂಬಸ್ಥರು

ಕಾಡಿನೊಳಗೆ ಎರಡು ರಾತ್ರಿ ಎರಡು ಹಗಲು ಕಳೆದ ಶಾರದಮ್ಮ:ಭಾನುವಾರ ಮಧ್ನಾಹ್ನ ಶಾರದಮ್ಮನವರು ತೋಟಕ್ಕೆ ಹೋದಾಗ ದನಗಳನ್ನು ಓಡಿಸಿಕೊಂಡು ಮುಂದೆ ಹೋಗಿದ್ದಾರೆ. ಈ ವೇಳೆಗೆ ಅವರು ಮನೆಯ ದಾರಿಯನ್ನು ತಪ್ಪಿದ್ದಾರೆ. ಇವರ ಜೊತೆ ಬಂದಿದ್ದ ನಾಯಿ ಇವರನ್ನು ಹಿಂಬಾಲಿಸಿಕೊಂಡು ಹೋಗಿದೆ. ನಿನ್ನೆ ಮಧ್ಯಾಹ್ನ ಶಾರದಮ್ಮನವರಿಗೆ ನಾಲ್ಕೈದು ದನಗಳು ಕಾಣಿಸಿಕೊಂಡಿದ್ದವು. ಇವರು ದನಗಳು ಸಾಗುವ ದಾರಿಯಲ್ಲಿಯೇ ಸಾಗಿದ್ದರು. ಆದರೆ ದನಗಳು ಮುಂದೆ ಹೋಗಿವೆ. ಇವರಿಗೆ ಎರಡು ದಿನ ಊಟ, ನೀರು ಇಲ್ಲದ ಕಾರಣ ದನಗಳನ್ನು ಹಿಂಬಾಲಿಸಿಕೊಂಡು ಹೋಗಲು ಅಗದೆ ಮತ್ತೆ ದಾರಿ ತಪ್ಪಿಸಿಕೊಂಡಿದ್ದಾರೆ.

ಶಾರದಮ್ಮನವರು ಸಾವೆಹಕ್ಲು ಡ್ಯಾಂನ ಹಿನ್ನೀರಿನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಕಬ್ಬಿನ ಹಿತ್ತಲು ಎಂಬ ಕುಗ್ರಾಮದ ಬಳಿ ತಲುಪಿದ್ದಾರೆ. ದನಗಳ ಹಿಂದೆ ಹೋದ ಅಜ್ಜಿ ದಾರಿ ತಪ್ಪಿದಾಗ ಜೋರಾಗಿ ಕೂಗಿಕೊಂಡಿದ್ದಾರೆ. ಇವರ ಧ್ವನಿ ಕಬ್ಬಿನ ಹಿತ್ತಲು ಗ್ರಾಮದ ಸುರೇಶ್ ಶೆಟ್ಟಿ ಎಂಬುವರಿಗೆ ಕೇಳಿಸಿದೆ. ಇಷ್ಟು ರಾತ್ರಿಯಲ್ಲಿ ಯಾರು ಹೀಗೆ ಕೂಗುತ್ತಿದ್ದಾರೆ ಎಂದು ಹುಡುಕಿದಾಗ ಶಾರದಮ್ಮ ಪತ್ತೆಯಾಗಿದ್ದಾರೆ. ಸುರೇಶ್ ಶೆಟ್ಟಿ ಅವರು ಶಾರದಮ್ಮ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವೃದ್ಧೆ ಶಾರದಮ್ಮ

ತಕ್ಷಣ ಪೊಲೀಸರು ಶಾರದಮ್ಮ ಅವರ ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದ್ದಾರೆ. ನಂತರ ಕುಟುಂಬಸ್ಥರು ಕಬ್ಬಿನ ಹಿತ್ತಲು ಗ್ರಾಮಕ್ಕೆ ತೆರಳಿ ಅಜ್ಜಿಯನ್ನು ನೋಡಿದಾಗ ಅವರ ಕಾಲಿಗೆ ಇಂಬಳ ಹುಳ ಕಚ್ಚಿದ್ದವು. ಹುಳಗಳನ್ನು ಬಿಡಿಸಿದಾಗ ಅವರ ಕಾಲಿನಿಂದ ರಕ್ತ ಸುರಿಯುತ್ತಿತ್ತು. ಸದ್ಯ ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.

ಶಾರದಮ್ಮ ಪತ್ತೆಯಾಗಿರುವ ಬಗ್ಗೆ ಅವರ ಸಂಬಂಧಿ ಮಾಲತೇಶ್ ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಮಾತನಾಡಿ, ಶಾರದಮ್ಮನವರು ದಾರಿ ತಪ್ಪಿ ತೋಟದಿಂದ ಕಾಡಿನ ಒಳಗೆ ಹೋಗಿದ್ದರು. ಅವರ ಪತ್ತೆಗೆ ಎರಡು ದಿನ ನಾವೆಲ್ಲಾ ಹುಡುಕಾಟ ನಡೆಸಿದ್ದೆವು. ನಿನ್ನೆ ಮಧ್ಯಾಹ್ನ ನಮ್ಮ ಅತ್ತೆಯ ಜೊತೆ ಹೋಗಿದ್ದ ನಾಯಿ ವಾಪಸ್ ಆಗಿತ್ತು. ಆದರೂ ಸಹ ನಾವು ನಮ್ಮ ಹುಡುಕಾಟವನ್ನು ಬಿಟ್ಟಿರಲಿಲ್ಲ. ಅವರು ದಾರಿ ತಪ್ಪಿ‌ ಕಬ್ಬಿನ ಹಿತ್ತಲು ಗ್ರಾಮದ ಬಳಿ ಇದ್ದಾರೆ ಎಂದಾಗ ನಮಗೆಲ್ಲಾ ಸಾಕಷ್ಟು ಸಂತೋಷವಾಯಿತು. ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಬಾಕ್ಸ್​ನಲ್ಲಿ ಉಪ್ಪು ತುಂಬಿ ಹಣವಿದೆ ಎಂದು ವಂಚಿಸಲು ಯತ್ನ- ಎಸ್​ಪಿ

Last Updated : Nov 9, 2023, 12:09 PM IST

ABOUT THE AUTHOR

...view details