ಕರ್ನಾಟಕ

karnataka

ETV Bharat / state

ಶಿವಮೊಗ್ಗ: ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಕೋಟೆ ಪೊಲೀಸ್​ ಠಾಣೆಗೆ ಹಾಜರು

ಶಿವಮೊಗ್ಗದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಪತ್ತೆಯಾಗಿದ್ದಾರೆ.

missing-govt-employee-came-to-police-station-in-shivamogga
ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಪತ್ತೆ: ಕೋಟೆ ಪೊಲೀಸ್​ ಠಾಣೆಗೆ ಹಾಜರು

By

Published : Jul 23, 2023, 7:01 AM IST

ಶಿವಮೊಗ್ಗ:ಜುಲೈ 19ರಂದು ಶಿವಮೊಗ್ಗದ ಎನ್​ಪಿಎಸ್ ನೌಕರರ ಸಂಘದ ಶಿವಮೊಗ್ಗ ತಾಲೂಕು ಅಧ್ಯಕ್ಷ ಪ್ರಭಾಕರ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಬೆಳಗ್ಗೆ ಮನೆಯಿಂದ ಹೊರಟ ಪ್ರಭಾಕರ್ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿದ್ದರು. ಪತ್ನಿ ದೀಪ, ಕೋಟೆ ಪೊಲೀಸ್ ಠಾಣೆಯಲ್ಲಿ ಪತಿ ನಾಪತ್ತೆಯಾಗಿರುವುದಾಗಿ ದೂರು ಸಲ್ಲಿಸಿದ್ದರು. ಇದೀಗ ಪ್ರಭಾಕರ್ ಕೋಟೆ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.

ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಪ್ರಭಾಕರ್​, ಕಾರ್ಕಳ, ಧರ್ಮಸ್ಥಳ, ಉಡುಪಿ, ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಂದ ಹರಿಹರಕ್ಕೆ ಬಂದು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ಬಂದಿದ್ದು, ಹೇಳಿಕೆ ನೀಡಿದ್ದಾರೆ.

"ಎನ್​ಪಿಎಸ್ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವಾಗ ತಮ್ಮ ಸಂಘದ ಸಂಘಟನೆ ಮಾಡಿದ್ದಕ್ಕೆ ಒಪಿಎಸ್ ನೌಕರರ ಸಂಘದಿಂದ ವಿರೋಧ ವ್ಯಕ್ತವಾಗಿತ್ತು. ನನ್ನ ವಿರುದ್ದ ಪಿತೂರಿ ನಡೆಸಿದ್ದರು. ಇದರಿಂದಲೇ ಎಫ್​ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನನ್ನು ಎಸ್​​ಡಿಎ ಆಗಿ ಹಿಂಬಡ್ತಿ ಮಾಡಲಾಗಿತ್ತು. ಇದರಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹಾಗೂ ಇತರರ ಪಿತೂರಿ ಇದೆ. ಇವರು ನನ್ನನ್ನು ಹಿಂಬಡ್ತಿ ಮಾಡಿಸಿ, ಕಳೆದ ಆರು ತಿಂಗಳ ಸಂಬಳ ಆಗದಂತೆ ನೋಡಿಕೊಂಡಿದ್ದಾರೆ."

"ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಎಫ್​​ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನನ್ನು ಎಸ್​ಡಿಎ ಆಗಿ ಚಿತ್ರದುರ್ಗ ಜಿಲ್ಲೆಯ ಬೇತೂರು ಪಾಳ್ಯಕ್ಕೆ ವರ್ಗಾವಣೆ ಮಾಡಿದ್ದು ಬೇಸರವಾಯಿತು. ನಾನು ಹೊನ್ನಾಳಿ ಬಿಇಒಗೆ ಸಂಬಳ ಮಾಡಿ ಎಂದು ಕೇಳಿಕೊಂಡಿದ್ದೆ. ಅವರು ಸಂಬಳ‌ ಮಾಡಲಿಲ್ಲ. ಇದರಿಂದ‌ ನನಗೆ ಆರ್ಥಿಕ ಸಮಸ್ಯೆ ಉಂಟಾಗಿತ್ತು. ಜುಲೈ 20ರಂದು ನನ್ನ ಮಗಳ ಹುಟ್ಟುಹಬ್ಬಕ್ಕೆ ಹಣ‌ ಇರಲಿಲ್ಲ. ಇದರಿಂದಾಗಿ ನಾನು ಜೀವನವೇ ಸಾಕು ಎಂದು ಸಾಯಲು ಹೋಗಿದ್ದೆ. ಆದರೆ ಅದು ನನ್ನಿಂದ ಸಾಧ್ಯವಾಗಲಿಲ್ಲ. ಧರ್ಮಸ್ಥಳಕ್ಕೆ ಹೋಗಿ ಈಗ ವಾಪಸ್ ಬಂದಿದ್ದೇನೆ. ಸಾಕಷ್ಟು ನೋವಿನಲ್ಲಿದ್ದೇನೆ. ನನ್ನ ಹೋರಾಟ ಮುಂದುವರೆಯುತ್ತದೆ" ಎಂದು ಪ್ರಭಾಕರ್ ಹೇಳಿದ್ದಾರೆ.

ಪ್ರಭಾಕರ್ ಆರೋಪಕ್ಕೆ ಸರ್ಕಾರಿ‌ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪ್ರತಿಕ್ರಿಯಿಸಿ, "ನಾನು ಪ್ರಭಾಕರ್ ವಿರುದ್ದ ಪಿತೂರಿ ಮಾಡಿದ್ದ ಬಗ್ಗೆ ದಾಖಲೆ ನೀಡಿದ್ರೆ ಚರ್ಚೆಗೆ ಸಿದ್ದ. ಅವರ ಆರೋಪದಲ್ಲಿ ಹುರುಳಿಲ್ಲ. ನಾನು ಅವರಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ನಮ್ಮ ಬ್ಯಾಂಕ್​ನಲ್ಲಿಯೇ 5 ಲಕ್ಷ ರೂ ಸಾಲ‌ ಕೊಡಿಸಿದ್ದೇನೆ. ಶಿವಮೊಗ್ಗಕ್ಕೆ ವರ್ಗಾವಣೆ ಮಾಡುವಂತೆ ನಾನೇ ಪತ್ರ ನೀಡಿದ್ದೇನೆ. ಅವರಿಗೆ ತೊಂದರೆ ನೀಡಿದ್ದೇನೆ ಎಂದಾದರೆ ಅವರು ಸಾಬೀತುಪಡಿಸಲಿ. ಅಲ್ಲದೆ ಪ್ರಭಾಕರ್ ಕಾಣೆಯಾದ ದಿನದಂದು ನಾನು‌ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಗೆ ದೂರು‌ ನೀಡಿದ್ದೇನೆ. ನನ್ನ ವಿರುದ್ದ ಕಾರಣವಿಲ್ಲದೆ ಆರೋಪ‌ ಮಾಡುತ್ತಿರುವ ಹಿಂದೆ ಕೆಲವರು ಇದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ತನಿಖೆ‌ ನಡೆಸ‌ಬೇಕು" ಎಂದು ಒತ್ತಾಯಿಸಿದರು.

ಇದನ್ನೂ ಓದಿ :ನೌಕರಿಯಲ್ಲಿ ಹಿಂಬಡ್ತಿ, 6 ತಿಂಗಳಿಂದ ವೇತನ ಸಿಗದೆ ಸರ್ಕಾರಿ ನೌಕರ ನಾಪತ್ತೆ: ಪೊಲೀಸರಿಗೆ ದೂರು ನೀಡಿದ ಪತ್ನಿ

ABOUT THE AUTHOR

...view details