ಶಿವಮೊಗ್ಗ: ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಹಿಂಭಾಗದಿಂದ ಮಾದಕ ವಸ್ತು ಮತ್ತು ಮೊಬೈಲ್ ಎಸೆಯಲು ಬಂದಿದ್ದ ಇಬ್ಬರು ಆರೋಪಿಗಳನ್ನು ಕಾರಾಗೃಹ ಸಿಬ್ಬಂದಿ ಬಂಧಿಸಿದ್ದಾರೆ.
ಘಟನೆಯ ಪೂರ್ಣ ವಿವರ: ಬುಧವಾರ ಸಂಜೆ 4 ಗಂಟೆಯ ಸುಮಾರಿಗೆ ಕಾರಾಗೃಹದ ಪಶ್ಚಿಮ ಗೋಡೆಯ ಸಮೀಪ ಅನುಮಾನಾಸ್ಪದವಾಗಿ ಇಬ್ಬರು ನಿಂತಿದ್ದನ್ನು ಸಿಬ್ಬಂದಿ ನೋಡಿದ್ದಾರೆ. ತಕ್ಷಣವೇ ವಾಕಿಟಾಕಿ ಮೂಲಕ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಮಾಹಿತಿ ಪಡೆದ ಎಸ್ಐ ಪುನೀತ್ ಹಾಗೂ ಕೇಂದ್ರ ಕಾರಾಗೃಹದ ಹೆಡ್ ವಾರ್ಡನ್ ಗಜೇಂದ್ರ.ಎಸ್ ಆರೋಪಿಗಳ ಚಲನವಲನವನ್ನು ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದ್ದಾರೆ.
ಬಳಿಕ ಆರೋಪಿಗಳ ಮೇಲೆ ಸಂಶಯ ಖಾತರಿಯಾಗುತ್ತಲೇ ಎಸ್ಐ ಪುನೀತ್ ಹಾಗೂ ಮುಖ್ಯ ವೀಕ್ಷಕ ಗಜೇಂದ್ರ ಆರೋಪಿಗಳ ಬಳಿ ತೆರಳಿದ್ದಾರೆ. ಈ ವೇಳೆ ಆರೋಪಿಗಳು ತಾವು ತಂದಿದ್ದ ಪ್ಯಾಕೆಟ್ಗಳನ್ನು ಅಲ್ಲಿಯೇ ಬಿಸಾಡಿ ಸಿದ್ದರಗುಡಿಯ ಕಡೆಗೆ ಓಡಿದ್ದಾರೆ. ಆರೋಪಿಗಳನ್ನು ಬೆನ್ನಟ್ಟಿದ ಕಾರಾಗೃಹ ಸಿಬ್ಬಂದಿ ಸುಮಾರು ದೂರ ಓಡಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.