ಶಿವಮೊಗ್ಗ: ಸಿಎಂ ತವರು ಜಿಲ್ಲೆಯಲ್ಲಿ ಕಳೆದ ಶನಿವಾರ ರಾತ್ರಿ ಅಪ್ರಾಪ್ತ ಬಾಲಕಿಗೆ ಊಟ ಕೊಡಿಸುವುದಾಗಿ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ತಾತ್ಕಾಲಿಕ ಹೊರಗುತ್ತಿಗೆಯಲ್ಲಿ ನೇಮಕವಾಗಿದ್ದ ಮನೋಜ್, ಆತನ ಸ್ನೇಹಿತರಾದ ಪ್ರಜ್ವಲ್, ವಿನಯ್ ಹಾಗೂ ಸಂದೀಪ್ ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನಲೆ:ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಾಯಿಯ ಆರೈಕೆಯಲ್ಲಿದ್ದ 16 ವರ್ಷದ ಅಪ್ರಾಪ್ತೆಯ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಪ್ರಾಪ್ತೆ ಮೇಲೆ ಅತ್ಯಚಾರ ಎಸಗಿದ ನಾಲ್ವರ ಬಂಧನ ಇದನ್ನೂ ಓದಿ..ಊಟ ಕೊಡಿಸ್ತೀನೆಂದು ಆಕೆಯನ್ನೇ ತಿಂದುಂಡರು.. ಜಿಲ್ಲಾಸ್ಪತ್ರೆ ಕಾಮುಕ ಮತ್ತವನ ಗ್ಯಾಂಗ್‌ನ ರಾಕ್ಷಸಿ ಕೃತ್ಯ
ಸಂತ್ರಸ್ತೆಯ ತಾಯಿ ನವೆಂಬರ್ 12ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿಯ ಆರೈಕೆಗೆಂದು 16 ವರ್ಷದ ಬಾಲಕಿ ವಾರ್ಡ್ ಹೊರೆಗೆ ಇರುತ್ತಿದ್ದಳು. ಈ ವೇಳೆ ಆರೋಪಿ ಮನೋಜನ ಪರಿಚಯವಾಗಿ, ಡಿಸೆಂಬರ್ 5ರ ರಾತ್ರಿ ಊಟ ಕೊಡಿಸುವುದಾಗಿ ಹೇಳಿ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ಆತನ ಮೂವರು ಸ್ನೇಹಿತರು ಸೇರಿಕೊಂಡಿದ್ದಾರೆ.
ಕಾರಿನಲ್ಲಿ ನಾಲ್ವರು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಆಸ್ಪತ್ರೆಯ ಆವರಣಕ್ಕೆ ತಂದು ಬಿಟ್ಟಿದ್ದಾರೆ. ಬಹಳ ಸಮಯ ಕಳೆದರೂ ಮಗಳು ಬಾರದೆ ಇದ್ದಿದ್ದರಿಂದ ಆಕೆಯ ತಾಯಿ ಆಸ್ಪತ್ರೆಯ ಸೆಕ್ಯೂರಿಟಿಗೆ ತಿಳಿಸಿದ್ದಾರೆ. ಸೆಕ್ಯೂರಿಟಿ ಅವರು ಬಾಲಕಿ ನಾಪತ್ತೆ ಆಗಿದ್ದರ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಬಾಲಕಿ ಬಂದ ನಂತರ ಸೆಕ್ಯೂರಿಟಿಯವರು ಆಕೆಯನ್ನು ಪೊಲೀಸರ ಬಳಿ ಕರೆದೊಯ್ದಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ನಾಲ್ವರು ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿದೆ. ನಂತರ ಬಾಲಕಿಯನ್ನು ಸಖಿ ಕೇಂದ್ರದಲ್ಲಿ ಇರಿಸಲಾಯಿತು. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದಾರೆ.