ಶಿವಮೊಗ್ಗ: ಪ್ರತಿ ತಾಲೂಕಿಗೆ 4-6ರಂತೆ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಸುಮಾರು 3,000 ಕೆಪಿಎಸ್ ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಹೇಳಿದ್ದಾರೆ.
ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯ ಸಹಯೋಗದೊಂದಿಗೆ ಇಂದು ಸೊರಬದ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ 14 ಮತ್ತು 17ವರ್ಷ ವಯೋಮಿತಿಯೊಳಗಿನ ಬಾಲಕ,ಬಾಲಕಿಯರ ಥ್ರೋ ಬಾಲ್ ಪಂದ್ಯಾವಳಿಯನ್ನು ಮಧು ಬಂಗಾರಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆ ಸಹಕಾರಿ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಮಕ್ಕಳಲ್ಲಿನ ಸುಪ್ತ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡುವುದರ ಜೊತೆಗೆ ಸರ್ಕಾರ ಹಾಗೂ ಸ್ಥಳೀಯರ ಪ್ರೋತ್ಸಾಹವೂ ಅತ್ಯಗತ್ಯ. ಹಿಂದೆ ಇದ್ದ ಹಳೆಯ ಜನಪದ ಕ್ರೀಡೆಗಳು ಕಣ್ಮರೆಯಾಗಿವೆ. ಮಕ್ಕಳು ದೇಶದ ಸಾಧಕರ ಸಾಲಿನಲ್ಲಿ ನಿಲ್ಲುವಂತಾಗಲು ಸಕಾಲಿಕ ಪ್ರೋತ್ಸಾಹ ಅಗತ್ಯ. ಸ್ಥಳೀಯವಾಗಿಯೂ ಜಗತ್ತಿಗೆ ಪ್ರೇರಣೆಯಾಗಬಹುದಾದ ಪ್ರತಿಭೆಗಳಿವೆ. ಈ ಶಾಲೆಗಳಲ್ಲಿ ಪಠ್ಯ ವಿಷಯಗಳಲ್ಲದೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಸೇರಿದಂತೆ ಎಲ್ಲಾ ಪ್ರಕಾರದ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ ಹಂತದಿಂದ ದ್ವಿತೀಯ ಪಿಯುಸಿ ವರೆಗಿನ ಶಿಕ್ಷಣ ಪಡೆಯುವ ಮಕ್ಕಳಿಗೆ ಸಮಾಜದ ಎಲ್ಲಾ ಕ್ಷೇತ್ರಗಳ ಪರಿಚಯವಾಗಲಿದೆ ಮಾತ್ರವಲ್ಲ, ಅವರ ಸರ್ವಾಂಗೀಣ ವಿಕಾಸಕ್ಕೆ ಅವಕಾಶವಾಗಲಿದೆ ಎಂದು ಮಧು ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.