ಶಿವಮೊಗ್ಗ:ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಶಿಕ್ಷಣ ತಜ್ಞರ ಜೊತೆ ಮಾತನಾಡಿ ಪುಸ್ತಕರ ಹೊರೆ ಕಡಿಮೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದೆ ಎಂದರು.
ಸಪ್ಲಿಮೆಂಟರಿ ಪುಸ್ತಕಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಈಗಾಗಲೇ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಶಾಲಾ ಕಟ್ಟಡಗಳ ದುರಸ್ತಿಗೂ ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು. 1ರಿಂದ 8ನೇ ತರಗತಿವರೆಗೆ ಇದ್ದ ಮೊಟ್ಟೆ ವಿತರಣೆಯನ್ನು 10ನೇ ತರಗತಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ಪ್ರಸ್ತುತ ವಾರಕ್ಕೆ 2 ಮೊಟ್ಟೆಗಳಂತೆ ವರ್ಷಕ್ಕೆ ಒಟ್ಟು 84(ಒಬ್ಬ ವಿದ್ಯಾರ್ಥಿಗೆ) ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ:ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲು ಹಣ ನೀಡಲಾಗುತ್ತಿದೆ. ಹಲವು ಫಲಾನುಭವಿಗಳ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ಗಳಲ್ಲಿನ ಹೆಸರಿನ ವ್ಯತ್ಯಾಸ ಬಗ್ಗೆ ಕ್ರಮ ವಹಿಸಿ ಹಣ ತಲುಪಿಸಲಾಗುವುದು. ಕೇಂದ್ರ ಸರ್ಕಾರದವರು ಅಕ್ಕಿಯನ್ನು ನೀಡಿದ್ದರೆ ಈ ರೀತಿಯ ಸಮಸ್ಯೆಯ ಪ್ರಶ್ನೆ ಇರುತ್ತಿರಲಿಲ್ಲ. ಅವರು(ಕೇಂದ್ರ) ಅಕ್ಕಿ ನೀಡದಿದ್ದ ಹಿನ್ನೆಲೆ ಹಣ ಕೊಡುವ ಸಮಸ್ಯೆ ಉದ್ಭವಿಸಿದೆ. ಇದು ತಾತ್ಕಾಲಿಕವಾಗಿದ್ದು, ಶೀಘ್ರವೇ ಪರಿಹಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶರಾವತಿ ನದಿ ಮುಳುಗಡೆ ಸಂತ್ರಸ್ತರ ಭೂಮಿ ಹಕ್ಕು ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸುತ್ತಾ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅರಣ್ಯ ಸಚಿವರು, ಕಂದಾಯ ಸಚಿವರು ಎಲ್ಲರ ಸಭೆ ಕರೆಯಲು ಮನವಿ ಮಾಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.