ಶಿವಮೊಗ್ಗ: ಕಾಂಗ್ರೆಸ್ ಅನ್ನು ಪ್ರಶ್ನಿಸುವ ಹಕ್ಕು ಬಿಜೆಪಿಯವರಿಗೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಸಚಿವರಾದ ಮೇಲೆ ಶಿವಮೊಗ್ಗ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಗ್ಯಾರಂಟಿ ವಿಚಾರದಲ್ಲಿ ಮಾತನಾಡುವುದು ಸರಿ ಅಲ್ಲ. ನಳಿನ್ ಕುಮಾರ್ ಕಟೀಲ್ ಅವರೇ ಮೊದಲು ನಿಮ್ಮ 15 ಲಕ್ಷ ರೂಪಾಯಿ ಎಲ್ಲಿಗೆ ಹೊಯ್ತು ಅಂತ ತಿಳಿಸಿ. ನಂತರ ನಾವು ಅದಕ್ಕೆ ಉತ್ತರ ಕೊಡುತ್ತೇವೆ ಎಂದು ತಿರುಗೇಟು ನೀಡಿದರು.
ಕಟೀಲ್ ಅವರು ಫೇಲ್ ಆಗಿದ್ದಾರೆ. ಈಗ ನೀವು 66ಕ್ಕೆ ಬಂದು ನಿಂತಿದ್ದಿರಿ. ಈಗಲಾದ್ರೂ ನಿಮಗೆ ಬುದ್ಧಿ ಬರಲಿಲ್ಲ ಎಂದ್ರೆ ನಿಮಗೆ ರಾಜ್ಯದ ಜನತೆ 37ಕ್ಕೆ ತಂದು ಕೂರಿಸುತ್ತಾರೆ. ಪ್ರಶ್ನೆ ಕೇಳುವ ಅಧಿಕಾರವನ್ನು ಬಿಜೆಪಿಯವರು ಕಳೆದುಕೊಂಡಿದ್ದಾರೆ. ಬಡವರ ಮನೆಯಲ್ಲಿ ಬೆಳಕು ಜಾಸ್ತಿ ಇರಬೇಕು ಎಂದು 200 ಯೂನಿಟ್ ವಿದ್ಯುತ್ ನೀಡಲಾಗುತ್ತಿದೆ. ಹಾಗಂತ ಅವರು ಫ್ರಿಡ್ಜ್, ವಾಷಿಂಗ್ ಮಷಿನ್ ತೆಗೆದುಕೊಳ್ಳಿ ಅಂತ ಹೇಳಲ್ಲ ಎಂದರು.
ಬಡವರಿಗೆ ಮಾಡಿದ ಯೋಜನೆ ಇದಾಗಿದೆ. ಓರ್ವ ವ್ಯಕ್ತಿ ಪ್ರತಿ ತಿಂಗಳು 60 ಯೂನಿಟ್ ಬಳಸಿದ್ರೆ, ಅದನ್ನು ವರ್ಷದ ಅಂದಾಜಿಗೆ ತೆಗೆದುಕೊಂಡು ಶೇ 10 ಜಾಸ್ತಿ ಮಾಡಬೇಕೆಂದು ಇದೆ. ಯಾರು 199 ಯೂನಿಟ್ ಬಳಸಿದ್ದಾರೆ. ಅವರು ಶೇ10 ರಷ್ಟು ಇದ್ರು ಸಹ 200 ಯೂನಿಟ್ ಬಳಸಿದ್ರು ಸಹ ಉಳಿದ 20 ಯೂನಿಟ್ ಅನ್ನು 199 ಯೂನಿಟ್ಗೆ ನೀಡಬೇಕಿದೆ ಎಂದರು. ಇದೆಲ್ಲಾ ಅನುಷ್ಠಾನಕ್ಕೆ ನಾವು ಸಿದ್ಧರಿದ್ದೇವೆ. ಬಿಜೆಪಿಯವರು ಕೇಳುತ್ತಾರೆ ಎಂದು ಜಾರಿ ಮಾಡಿಲ್ಲ, ಜನರಿಗಾಗಿ ನಾವು ಜಾರಿ ಮಾಡಿದ್ದೇವೆ ಎಂದು ಹೇಳಿದ್ರು.
ಪಠ್ಯ ಪುಸ್ತಕ ಪರಿಷ್ಕರಣೆ 100% ಗ್ಯಾರಂಟಿ: ಪಠ್ಯ ಪುಸ್ತಕದ ಪರಿಷ್ಕರಣೆ 100% ಖಂಡಿತ ಮಾಡೇ ಮಾಡುತ್ತೇವೆ. ಯಾವುದೇ ಗೊಂದಲವಿಲ್ಲ. ಮಕ್ಕಳಿಗೆ ಅವಶ್ಯಕತೆ ಏನಿದೆಯೋ ಅದನ್ನು ನೀಡುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಆಗುತ್ತದೆ ಎಂದು ತಿಳಿಸಿದ್ವಿ. ಈಗಾಗಲೇ ಪಠ್ಯ ಪುಸ್ತಕಗಳು ಶಾಲೆಗಳಿಗೆ ತಲುಪಿದ್ದು, ಅದನ್ನು ತಡೆಯಲು ಅಗಲಿಲ್ಲ ಎಂದರು. ನಾನು ಅಧಿಕಾರ ತೆಗೆದುಕೊಂಡಾಗ ಪಠ್ಯ ಪುಸ್ತಕ ಹೋಗಿ ಆಗಿತ್ತು. ಅದಕ್ಕೆ ಕಾನೂನು ಬದ್ಧವಾಗಿ ತಡೆಯುವ ವ್ಯವಸ್ಥೆ ಇದೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಜೊತೆ ಚರ್ಚೆ ನಡೆಸಲಾಗಿದೆ. ಸಿಎಂ ಅವರ ನೇತೃತ್ವದಲ್ಲಿ ಎಲ್ಲಾ ನಡೆಯುತ್ತಿದೆ. ಅವರ ಆಸೆ ಸಹ ಪಠ್ಯ ಪುಸ್ತಕ ಬದಲಾವಣೆ ಮಾಡಬೇಕೆಂದು ಇದೆ. ಮಕ್ಕಳ ಭವಿಷ್ಯಕ್ಕಾಗಿ ಏನು ಬದಲಾವಣೆ ಮಾಡಬೇಕೂ ಅದನ್ನು ಮಾಡೇ ಮಾಡುತ್ತೇವೆ. ಅದರಲ್ಲಿ ಏನೂ ಬದಲಾವಣೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಎಲ್ಲಾ ವಾತಾವರಣ ಚೆನ್ನಾಗಿದೆ. ಸ್ವಲ್ಪ ಆಡಳಿತವನ್ನು ಒಂದು ಹಂತಕ್ಕೆ ತರಬೇಕಿದೆ. ಉತ್ತಮ ಅಧಿಕಾರಿಗಳು, ಶಿಕ್ಷಕರು ಹಾಗೂ ಮಕ್ಕಳು, ಪೋಷಕರು ಇದ್ದಾರೆ. ಎಲ್ಲಾವನ್ನು ಸರಿಮಾಡೋಣ ಎಂದರು. ಶಾಸಕನಾಗಿ, ಮಂತ್ರಿಯಾಗಿ ಅದರಲ್ಲೂ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುವ ಮಂತ್ರಿ ಸ್ಥಾನ ಸಿಕ್ಕಿದ್ದು, ನನಗೆ ತುಂಬ ಸಂತೋಷವಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.