ಶಿವಮೊಗ್ಗ: ಜನತಾ ದರ್ಶನವನ್ನು ಜಿಲ್ಲಾ ಮಟ್ಟದಲ್ಲಿ ನಡೆಸಿದಂತೆ, ತಾಲೂಕು ಮಟ್ಟದಲ್ಲೂ ನಡೆಸುವ ಉದ್ದೇಶವಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರಥಮ ಜನತಾ ದರ್ಶನದಲ್ಲಿ ಭಾಗಿಯಾಗಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಅರ್ಜಿ ಪಡೆಯುವುದಲ್ಲ. ಅರ್ಜಿ ಪಡೆದ ಮೇಲೆ ಅದನ್ನು ವಿಲೇವಾರಿ ಮಾಡಿ ಕೆಲಸ ಆಗಬೇಕು. ಸಾಮಾನ್ಯ ಜನರು ಸಹ ಟೋಕನ್ ಪಡೆದು ಆಯಾ ಇಲಾಖೆಗೆ ಹೋಗಿ ಫಾಲೋಅಪ್ ಮಾಡಬೇಕು. ಅವರಿಗೆ ಗೂತ್ತಾಗದೆ ಹೋದರೆ, ನಮ್ಮ ಕಚೇರಿಗೆ ಹೋಗಲಿ, ಆಗ ನಮ್ಮ ಕಚೇರಿಯವರು ಅರ್ಜಿ ಕೊಟ್ಟವರು ಯಾವ ಕಚೇರಿಗೆ ಹೋಗಬೇಕೆಂದು ಹೇಳುತ್ತಾರೆ ಎಂದರು.
ಬಹಳ ಜನಕ್ಕೆ ಎಲ್ಲಿ ಹೋಗಿ ಸಹಾಯ ಕೇಳಬೇಕು ಅಂತಾನೇ ಗೂತ್ತಿಲ್ಲ. ನಮ್ಮ ಮುಖಂಡರ ಬಳಿ ಹೋದರೆ, ಅವರು ಕರೆದುಕೊಂಡು ಹೋಗಿ ಕೆಲಸ ಮಾಡಿಸುತ್ತಾರೆ. ಸಾಮಾನ್ಯ ಜನರು ಸೌಲಭ್ಯ ಪಡೆಯಲು ಹೋದಾಗ ಸಿಕ್ಕಿಹಾಕಿಕೊಳ್ಳುತ್ತಾರೆ. ಆಡಳಿತಾತ್ಮಕವಾಗಿ ಸರಿ ಇದ್ದರೆ ಎಲ್ಲಾವೂ ಸರಿ ಆಗುತ್ತದೆ. ಜನತಾ ದರ್ಶನ ತೃಪ್ತಿ ತಂದಿದೆ. ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ಒಳ್ಳೆಯದು ಎಂದು ಹೇಳಿದರು.
ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಸ್ಯೆಗಳು ಇಲ್ಲಿಯೇ ಇತ್ಯಾರ್ಥವಾಗುತ್ತದೆ. ಆದರೆ ರಾಜ್ಯ ಮಟ್ಟದ ಭೂಮಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರ ಆಗುವುದು ಮುಖ್ಯವಾಗುತ್ತದೆ. ಜನ ವಿಶ್ವಾಸದಿಂದ ಇರಲಿ, ನಮ್ಮ ಸರ್ಕಾರ ಭೂಮಿ ಹಕ್ಕನ್ನು ಕಾನೂನಾತ್ಮಕಗೊಳಿಸಲು ಎಲ್ಲಾ ಪ್ರಯತ್ನವನ್ನು ನಾವು ಮಾಡುತ್ತೇವೆ. ಆದರೆ ಕೆಲವು ಕೇಂದ್ರ ಸರ್ಕಾರ ಹಾಗೂ ಕೋರ್ಟ್ ಮಟ್ಟದಲ್ಲಿ ಇರುತ್ತದೆ. ಈ ಸಂಬಂಧ ನಾವು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.
ಜನರು ನಮ್ಮ ಬಳಿ ಸಮಸ್ಯೆ ಅಂತ ಬಂದಾಗ, ಕಾನೂನು ಇಲ್ಲ ಅಂತ ಹೇಳುವುದಲ್ಲ, ಬದಲಿಗೆ ಕ್ಯಾಬಿನೆಟ್ ನಲ್ಲಿ ಕಾನೂನು ಮಾಡಿ ಆ ಸಮಸ್ಯೆಗೆ ಪರಿಹಾರ ನೀಡಬೇಕು. ಇದಕ್ಕಾಗಿ ಸಿಎಂ ಅವರು ನಮಗೆ ಇಲ್ಲಿ ಏನ್ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಳ್ಳಲು ಜನತಾ ದರ್ಶನ ಮಾಡಲು ಕಳುಹಿಸಿರಬೇಕು. ಇದು ಕ್ಯಾಬಿನೆಟ್ ನಲ್ಲಿ ಕುಳಿತುಕೊಂಡು ಮಾತನಾಡಲು ಸಹಾಯಕವಾಗುತ್ತದೆ. ಇಂದಿನ ಜನತಾ ದರ್ಶನ ನನಗೆ ತುಂಬು ಖುಷಿ ತಂದಿದೆ ಎಂದು ತಿಳಿಸಿದರು.