ಶಿವಮೊಗ್ಗ:ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಮೇವಿಗೆ ಕೊರತೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಮತ್ತು ಸಾಕ್ಷರತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ವಿಚಾರವಾಗಿ ಸಿಎಂ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ನೀರಿನ ಸಮಸ್ಯೆ, ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಾವು ಈಗಾಗಲೇ ಕೆಡಿಪಿ ಸಭೆ ನಡೆಸಿ ಜಿಲ್ಲೆಯ ಸಮಗ್ರ ಮಾಹಿತಿ ಪಡೆದಿದ್ದು, ನವೆಂಬರ್ 15 ರ ಒಳಗೆ ವರದಿ ನೀಡುವಂತೆ ಸೂಚಿಸಿದ್ದರು. ಈಗ ವರದಿ ಸಿದ್ದವಾಗಿದೆ ಎಂದರು.
ಮೇವಿಗೆ ಸದ್ಯ ಯಾವುದೇ ಸಮಸ್ಯೆ ಆಗಲ್ಲ ಎಂದು ಡಿಸಿ ತಿಳಿಸಿದ್ದಾರೆ. ಸೊರಬ ತಾಲೂಕಿನ ಆನವಟ್ಟಿ ಹಾಗೂ ಸೊರಬದ ಒಂದೂಂದು ವಾರ್ಡ್ಗೆ ಟ್ಯಾಂಕರ್ ನಲ್ಲಿ ಕುಡಿಯುವ ನೀರನ್ನು ಪೊರೈಕೆ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಜಿಲ್ಲೆಯ 238 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಲಿದೆ ಎಂದು ಸಮೀಕ್ಷೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ 6.42 ಲಕ್ಷ ಮೇವು ಬೇಕಾಗುತ್ತಿದೆ. ಸದ್ಯ ವಾರಕ್ಕೆ 27 ಟನ್ ಮೇವು ಬೇಕಾಗುತ್ತದೆ ಎಂದು ವಿವರಿಸಿದರು.
ಬಿಜೆಪಿರವರಿಗೆ ಧಮ್ ತಾಕತ್ ಇದ್ದರೆ ಕೇಂದ್ರದಿಂದ ಹಣ ತರಲಿ:ತೋಟಗಾರಿಕೆ ಬೆಳೆಯ ನಷ್ಟದ ಕುರಿತು ಈಗ ಸಮೀಕ್ಷೆ ಮಾಡಲಾಗುತ್ತಿದೆ. ರಾಜ್ಯದಿಂದ 17 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂಬ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಆದರೆ, ಕೇಂದ್ರದ ಅವರು ಹಣ ಬಿಡುಗಡೆ ಕುರಿತು ಯಾರು ಮಾತನಾಡುತ್ತಿಲ್ಲ. ಅಲ್ಲಿ ಅಧಿಕಾರಿಗಳು ಸಹ ಮಾತನಾಡುತ್ತಿಲ್ಲ. ಬಿಜೆಪಿರವರು ಬರ ಅಧ್ಯಯನ ನಡೆಸುತ್ತಿದ್ದಾರೆ. ಅವರು ಬರ ಅಧ್ಯಯನದ ವರದಿ ಯಾರಿಗೆ ನೀಡುತ್ತಾರಂತೆ ಎಂದು ಪ್ರಶ್ನೆ ಮಾಡಿದ ಮಧು ಬಂಗಾರಪ್ಪ ಬಿಜೆಪಿ ಅವರಿಗೆ ಧಮ್ ತಾಕತ್ ಇದ್ರೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲಿ ಎಂದು ಕಿಡಿಕಾರಿದರು.
ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಇಲ್ಲ:ವಿದ್ಯುತ್ 7 ಗಂಟೆಗಳ ಕಾಲ ನೀಡಲಾಗುತ್ತಿದೆ. ಬೆಳೆಗೆ ನೀರು ನೀಡಲಾಗುತ್ತಿದೆ. ನನಗೆ ದೂರು ಬಂದ ಕಡೆ ನಾನೇ ಮಾತನಾಡುತ್ತಿದ್ದೇನೆ ಎಂದರು. ಶಿವಮೊಗ್ಗದ ಸಿಟಿಗೂ ದಿನದ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಲೋಡ್ಡ್ ಶೆಡ್ಡಿಂಗ್ ನಡೆಸುತ್ತಿಲ್ಲ, ನಮ್ಮಲ್ಲಿ ಯಾವುದೇ ವಿದ್ಯುತ್ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗೃಹ ಜ್ಯೋತಿ ಯೋಜನೆಯಡಿ 5.31 ಲಕ್ಷದ 4.63 ಲಕ್ಷ ಬಳಕೆದಾರರಿದ್ದಾರೆ. ಇದರಲ್ಲಿ 53 ಕೋಟಿ ರೂ ವಿದ್ಯುತ್ ನೀಡಲಾಗುತ್ತಿದೆ ಎಂದರು. ಗೃಹ ಲಕ್ಷ್ಮಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಿದ್ದಾರೆ. ಯಾರಿಗೆ ಇದುವರೆಗೂ ಹಣ ಬಂದಿಲ್ಲವೋ ಕೆಲವು ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ. ಮುಂದೆ ಅವರಿಗೂ ಹಿಂದಿನದು ಎಲ್ಲ ಸೇರಿಕೊಂಡು ಬರುತ್ತದೆ ಎಂದರು.