ಕರ್ನಾಟಕ

karnataka

ETV Bharat / state

ಉಚಿತ ಕೊರೊನಾ ಲಸಿಕೆ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಲಾಗುವುದು; ಸಚಿವ ಈಶ್ವರಪ್ಪ

ಇತರೆ ದೇಶಕ್ಕೆ ಹೋಲಿಸಿದ್ರೆ ಭಾರತದಲ್ಲಿ ತಯಾರಿಸಿರುವ ಕೊರೊನಾ ಲಸಿಕೆ ಅಗ್ಗದ್ದು ಎಂದು ಸಚಿವ ಈಶ್ವರಪ್ಪ ಹೇಳಿದ್ರು. ಇನ್ನು ಸುಮಾರು ಮೂರು ಕೋಟಿ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ನಮ್ಮ ಜಿಲ್ಲೆಯಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಸುಮಾರು 25 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಶಿವಮೊಗ್ಗದಲ್ಲಿ ಲೋಕಸಭಾ ಸದಸ್ಯ ಬಿವೈ ರಾಘವೇಂದ್ರ ತಿಳಿಸಿದ್ರು.

minister ks Ishrappa reaction about kovid vaccine
ಶಿವಮೊಗ್ಗ

By

Published : Jan 16, 2021, 3:12 PM IST

ಶಿವಮೊಗ್ಗ: ಕೊರೊನಾ ಪಿಡುಗಿನ ವಿರುದ್ಧ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಸಿದ್ಧಪಡಿಸಿರುವ ಲಸಿಕೆ ಅತ್ಯಂತ ಕಡಿಮೆ ದರದ್ದಾಗಿದ್ದು, ಬಡವರಿಗೂ ಕೈಗೆಟುಕುವಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗ
ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈಶ್ವರಪ್ಪ ಮಾತನಾಡಿದರು. ಬೇರೆ ದೇಶಗಳ ಲಸಿಕೆಯನ್ನು ಮೈನಸ್ ಡಿಗ್ರಿಯಲ್ಲಿ ಸಂಗ್ರಹಿಸಿಡುವ ಅನಿವಾರ್ಯತೆ ಇದ್ದು, ನಮ್ಮ ದೇಶದಲ್ಲಿ ತಯಾರಿಸಿರುವ ಲಸಿಕೆಯನ್ನು ಸುಲಭವಾಗಿ ದಾಸ್ತಾನು ಮಾಡಬಹುದಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಇದೀಗ ಪ್ರತಿಯೊಬ್ಬರಿಗೂ ಲಸಿಕೆಯನ್ನು ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿ ಲಸಿಕೆಯನ್ನು ಸಿದ್ಧಪಡಿಸಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿವೈ ರಾಘವೇಂದ್ರ ಮಾತನಾಡಿ, ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‍ಗಳಿಗೆ ಲಸಿಕೆಯನ್ನು ಹಾಕಲಾಗುತ್ತಿದ್ದು, ಸುಮಾರು ಮೂರು ಕೋಟಿ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ನಮ್ಮ ಜಿಲ್ಲೆಯಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಸುಮಾರು 25 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದರು.
ಮುಂದಿನ ಹಂತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಲಸಿಕೆ ಬಂದಿದೆ ಎಂದು ನಿರ್ಲಕ್ಷ್ಯ ತಾಳದೆ ಕೊರೊನಾ ವಿರುದ್ಧ ಹೋರಾಟ ಮುಂದುವರೆಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಮುಂದುವರೆಸಬೇಕು ಎಂದು ಅವರು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಶಾಸಕ ಅಶೋಕ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಜ್ಯೋತಿ ಪ್ರಕಾಶ್, ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಮೆಗ್ಗಾನ್ ನಿರ್ದೇಶಕ ಡಾ. ಸಿದ್ಧಪ್ಪ, ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರ್, ಮೆಗ್ಗಾನ್ ನಿರ್ದೇಶಕರಾದ ಡಾ. ವಾಣಿ ಕೋರಿ, ಡಾ. ಗೌತಮ್, ದಿವಾಕರ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ABOUT THE AUTHOR

...view details