ಶಿವಮೊಗ್ಗ:ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಇವರಿಗೆ ನಾನು ಇಷ್ಟೇ ಹೇಳೋದು. ಈ 14 ದಿನಗಳ ಕಾಲ ನಿಮ್ಮ ಬಾಯಿಗೂ ಲಾಕ್‌ಡೌನ್ ಮಾಡಿಕೊಳ್ಳಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಪ್ಯಾಕೇಜ್ ಘೋಷಿಸಲು ವಿಪಕ್ಷಗಳ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ನಿಮ್ಮ ಬಾಯಿಗೆ ಬೀಗ ಹಾಕಿಕೊಂಡರೆ ಲಾಕ್‌ಡೌನ್ ಯಶಸ್ವಿಯಾಗುತ್ತದೆ. ಅದಾದ ನಂತರ ನಾವು-ನೀವು ಏನ್ ಬೇಕಾದ್ರೂ ಯಾವ ಭಾಷೆಯಲ್ಲಾದರೂ ಮಾತನಾಡೋಣ.
ರಾಜ್ಯದ ಜನ ಸಾಯ್ತಾ ಇದ್ದಾರೆ. ನೀವು ಪ್ರತಿಯೊಂದಕ್ಕೂ ಟೀಕೆ ಮಾಡುತ್ತಾ ಕುಳಿತ್ತಿದ್ದೀರಾ? ಒಳ್ಳೇದು ಒಂದಾದ್ರೂ ಅಭಿನಂದನೆ ಸಲ್ಲಿಸಿದ್ರಾ? ಬರೀ ಟೀಕೆ ಮಾಡೋಕೆ ವಿಪಕ್ಷ ಇದೆ ಎಂಬಂತಾಗಿದೆ.
ಎಸಿ ರೂಂ ಅಲ್ಲಿ ಕೂತು ಟೀಕೆ ಮಾಡ್ತಾರೋ? ಅಥವಾ ಎಲ್ಲಿ ಕೂತಿದ್ದಾರೋ ಗೊತ್ತಿಲ್ಲ. ಆದ್ರೇ, 14 ದಿನ ದಯವಿಟ್ಟು ಸುಮ್ಮನೆ ಇರಿ. ಜೊತೆಗೆ ಸಾಧ್ಯವಾದರೆ ಒಳ್ಳೆಯ ಸಲಹೆ ಕೊಡಿ ಎಂದರು.
ರೋಗಿಗಳಿಗೆ ಅನುಕೂಲ ಮಾಡಲು ಏನು ಮಾಡ್ಬೇಕು ಹೇಳಿ. ಅದನ್ನ ಬಿಟ್ಟು ₹10 ಸಾವಿರ ಕೊಡಿ ಅಂತೆ. ನಾವೇನ್ ಪ್ರಿಂಟ್ ಮಾಡ್ತೀವಾ.? ಎಂದು ಪ್ರಶ್ನಿಸಿದ ಈಶ್ವರಪ್ಪ ರೋಗಿಗಳಿಗೆ ಅನುಕೂಲಕ್ಕೆ ಅವರು ಎನು ಸಲಹೆ ಕೊಟ್ಟರೂ ನಾವು ಮಾಡಲು ತಯಾರಿದ್ದೇವೆ.
ಎಷ್ಟೋ ವರ್ಷದ ನಂತರ ನಾವು ನಿರೀಕ್ಷೆ ಮಾಡದೆ ಈ ರೀತಿಯ ರೋಗ ಬಂದಿದೆ. ಟೀಕೆ ವಿರೋಧ ಪಕ್ಷದ ಕರ್ತವ್ಯ. ಆದ್ರೆ, ರೋಗದ ಸಂದರ್ಭದಲ್ಲಿ ಬಾಯಿಗೆ ಬಂದಂತೆ ಟೀಕೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಓದಿ:ಇಂತಹ ಕಠಿಣ ಆರ್ಥಿಕ ಸಂಕಷ್ಟದ ಮಧ್ಯೆಯೂ ಬಿಎಸ್ವೈ ಸರ್ಕಾರ ಮಾಡಿದ ಪ್ರಚಾರದ ಜಾಹೀರಾತು ಖರ್ಚು ಎಷ್ಟು ಗೊತ್ತಾ?