ಶಿವಮೊಗ್ಗ:ಸಂದರ್ಭ ಬಂದರೆನಾನು ಶಾಸಕ ಕ್ಷೇತ್ರವನ್ನಾದರೂ ಬಿಡುವೆ ಆದರೆ, ಸಹಕಾರಿ ಕ್ಷೇತ್ರವನ್ನು ಬಿಡುವುದಿಲ್ಲ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದರು. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ನಡೆದ 70ನೇ ಅಖಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ಸಮಯ ಬಂದರೆ ನಾನು ಶಾಸಕ ಸ್ಥಾನವನ್ನು ಬಿಡುತ್ತೇನೆ ಹೊರತು. ಸಹಕಾರಿ ಕ್ಷೇತ್ರವನ್ನು ಬಿಡುವುದಿಲ್ಲ. ಸಹಕಾರಿ ಕ್ಷೇತ್ರದಲ್ಲಿ ಎಲ್ಲ ವರ್ಗದವರಿಗೆ ಸಹಾಯ ಮಾಡುವ ಅವಕಾಶವಿದೆ. ಸದ್ಯ ಶಿವಮೊಗ್ಗದಿಂದ ಸಹಕಾರ ಸಪ್ತಾಹ ದಿನವನ್ನು ಪ್ರಾರಂಭ ಮಾಡಿದ್ದೇವೆ. ಸಮಾಜವಾದಿ ನೆಲೆಯಾದ ಶಿವಮೊಗ್ಗದಿಂದ ಈ ಮೂಲಕ ಸಹಕಾರ ಕ್ಷೇತ್ರಕ್ಕೆ ಹೊಸ ಮೆಸೇಜ್ ನೀಡಲು ಪ್ರಾರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ 500 ಟ್ರಿಲಿಯನ್ ಆರ್ಥಿಕ ಗುರಿ ಸಾಧಿಸುವ ಪ್ರಯತ್ನ ಸಹಕಾರ ಕ್ಷೇತ್ರದ ಮುಂದಿದೆ ಎಂದರು.
ನೆಹರು ಜನ್ಮ ದಿನದಂದೇ ಸಹಕಾರ ಸಪ್ತಾಹ ಮಾಡಲಾಗುತ್ತಿದೆ. ಕೇವಲ ಕರ್ನಾಟಕವಷ್ಟೇ ಅಲ್ಲದೆ ಭಾರತದೆಲ್ಲೆಡೆ ನಡೆಸಲಾಗುತ್ತದೆ. ಸಹಕಾರಿ ಆಂದೋಲನದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು. ಸಹಕಾರಿ ಆಂದೋಲನವನ್ನು ನಾವೆಲ್ಲ ಯಶಸ್ವಿ ಮಾಡಬೇಕಿದೆ. ಸಹಕಾರಿ ರಂಗಕ್ಕೆ ಮತ್ತಷ್ಟು ಯುವಕರು ಸೇರ್ಪಡೆಯಾಗಬೇಕು. ಸಹಕಾರ ರಂಗದಲ್ಲಿ ಸದ್ಯ ಕೆಲವು ಸಮಸ್ಯೆಗಳಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳುವ ಬುದ್ಧಿ ಶಕ್ತಿಯನ್ನು ಅಧಿಕಾರಿಗಳು ತೋರ್ಪಡಿಸಬೇಕು ಎಂದು ಸಚಿವರು ಕೆಲವು ಸಲಹೆ ನೀಡಿದರು.